ಸೀಜರ್ ಚಿತ್ರ ನಾಳೆ ತೆರೆಕಾಣುತ್ತಿದೆ. ಚಿತ್ರದಲ್ಲಿ ಒಂದು ಕಡೆ ಗೋಹತ್ಯೆ ಕುರಿತ ಡೈಲಾಗ್ ಇದೆ. ಪಾತ್ರಧಾರಿ ರವಿಚಂದ್ರನ್, ಹಸುವಿನ ತಲೆ ಕಡಿಯುವುದು ಹಾಗೂ ಹೆತ್ತ ತಾಯಿಯ ತಲೆ ಹಿಡಿಯುವುದು ಎರಡೂ ಒಂದೇ ಎಂದು ಹೇಳುವ ಡೈಲಾಗ್ ಅದು. ಆ ಸಂಭಾಷಣೆಗೆ ವಿರೋಧ ವ್ಯಕ್ತವಾಗಿತ್ತು. ಗೋಹತ್ಯೆ ಪರ ಇರುವ ಸಂಘಟನೆಗಳು ಹಾಗೂ ಚಿತ್ರತಂಡದ ಭಾಗವಾಗಿರುವ ಪ್ರಕಾಶ್ ರೈ, ನಿರ್ದೇಶಕ ವಿನಯ್ ಕೃಷ್ಣ ವಿರುದ್ಧ ಕೆಂಡಕಾರಿದ್ದರು. ಫೋನ್ ಮಾಡಿ ಬೈದಿದ್ದೇನೆ ಎಂದು ಹೇಳಿದ್ದರು ಪ್ರಕಾಶ್ ರೈ.
ಸಂಭಾಷಣೆಗೂ ರೈಗೂ ಸಂಬಂಧ ಇಲ್ಲ. ಅವರು ನನಗೆ ಫೋನ್ ಮಾಡಿಲ್ಲ ಎಂದಿದ್ದ ವಿನಯ್ ಕೃಷ್ಣ, ಈಗ ಚಿತ್ರದಲ್ಲಿ ಡೈಲಾಗ್‍ಗೆ ಮ್ಯೂಟ್ ಹಾಕಿಸಿದ್ದಾರೆ. ಅಂದರೆ, ಚಿತ್ರಮಂದಿರದಲ್ಲಿ ಈ ಸಿನಿಮಾ ನೋಡುವಾಗ ಆ ಸಂಭಾಷಣೆ ಬರುವ ವೇಳೆ ಬೀಪ್ ಸೌಂಡ್ ಮಾತ್ರ ಕೇಳುತ್ತೆ.
ನಟ ರವಿಚಂದ್ರನ್ ಕೂಡಾ ವಿವಾದ ಏಕೆ, ಡೈಲಾಗ್ ಬಿಡಿ ಎಂದು ಸೂಚಿಸಿದ ಹಿನ್ನೆಲೆಯಲ್ಲಿ ನಿರ್ದೇಶಕ ವಿನಯ್ ಹಾಗೂ ನಿರ್ಮಾಪಕ ತ್ರಿವಿಕ್ರಮ್ ಡೈಲಾಗ್‍ಗೆ ಕತ್ತರಿ ಆಡಿಸಿದ್ದಾರೆ. ಗೋಹತ್ಯೆ ಡೈಲಾಗ್ ಇಲ್ಲದ ಸೀಜರ್ ಸಿನಿಮಾ ನಾಳೆ ತೆರೆ ಕಾಣಲಿದೆ.