ಚಿತ್ರನಟಿ ಶರ್ಮಿಳಾ ಮತ್ತು ರಮ್ಯಾ ಅಲಿಯಾಸ್ ದಿವ್ಯಸ್ಪಂದನಾ ಮೊದಲಿನಿಂದಲೂ ಗೆಳತಿಯರು. ಇದು ಇಡೀ ಚಿತ್ರರಂಗಕ್ಕೇ ಗೊತ್ತು. ಈಗ ಶರ್ಮಿಳಾ ಮಾಂಡ್ರೆ ಕೂಡಾ ರಾಜಕೀಯಕ್ಕೆ ಬರ್ತಾರಾ..? ಇತ್ತೀಚೆಗೆ ರಾಹುಲ್ ಗಾಂಧಿ ಬೆಂಗಳೂರಿಗೆ ಬಂದಿದ್ದಾಗ ಶರ್ಮಿಳಾ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಇಂಥಾದ್ದೊಂದು ಕುತೂಹಲಕ್ಕೆ ಕಾರಣವಾಗಿದೆ. ಶರ್ಮಿಳಾ ರಾಜಕೀಯಕ್ಕೆ ಬರ್ತಾರಾ..? ಶರ್ಮಿಳಾ ಉತ್ತರ ಅಷ್ಟೇ ಇಂಟ್ರೆಸ್ಟಿಂಗ್.
ರಮ್ಯಾ ನಾನೂ ಒಳ್ಳೆಯ ಸ್ನೇಹಿತೆಯರು. ಹೀಗಾಗಿ ರಮ್ಯಾ ಕರೆದರೆಂದು ನಾನು ಹೋಗಿದ್ದೆ. ನಾನು ಕಾಂಗ್ರೆಸ್ ಸೇರಲೆಂದು ಹೋದವಳಲ್ಲ. ಕೇವಲ ರಮ್ಯಾಗೋಸ್ಕರ ಹೋಗಿದ್ದೆ. ರಾಜಕೀಯ ಅನ್ನೋದು ಎಲ್ಲಿರಲ್ಲ ಹೇಳಿ..? ಮತ ಹಾಕುವುದು ಕೂಡಾ ರಾಜಕೀಯವೇ ಅಲ್ವಾ..? ನಾನೂ ಅದರ ಭಾಗ. ಸಕ್ರಿಯ ರಾಜಕಾರಣ ನನಗೆ ಆಗಿಬರೋದಿಲ್ಲ. ಸಿನಿಮಾ ನನ್ನ ಕ್ಷೇತ್ರ. ಇಲ್ಲಿಯೇ ಏನಾದರೂ ಮಾಡಬೇಕಿದೆ.
ಇಷ್ಟುದ್ದದ ಮಾತು ಹೇಳುವ ಶರ್ಮಿಳಾ, ಹೌದು ಅಥವಾ ಇಲ್ಲ ಎಂಬ ಒಂದು ಸಾಲಿನ ಉತ್ತರ ಕೊಡೋದಿಲ್ಲ. ಮುಂದೆ ರಾಜಕೀಯದ ವಾಸನೆ ಬಡಿದರೆ ಅಚ್ಚರಿಯಿಲ್ಲ!