ಬಿಡುಗಡೆಯ ಹೊಸ್ತಿಲಲ್ಲಿ ನಿಂತಿರುವ ಚಿತ್ರ ಸೀಜರ್. ಆದರೆ, ಚಿತ್ರದ ಪ್ರಚಾರಕ್ಕೆ ಚಿತ್ರದ ಕಲಾವಿದರೇ ಸಹಕರಿಸುತ್ತಿಲ್ಲವಾ..? ಸೀಜರ್ ಚಿತ್ರದ ನಿರ್ಮಾಪಕ, ನಿರ್ದೇಶಕರ ಮಾತು ಕೇಳಿದರೆ ಹಾಗನ್ನಿಸೋದು ಸಹಜ.
ಚಿತ್ರದ ನಾಯಕಿ ಪಾರುಲ್ ಯಾದವ್. ಆದರೆ, ನಿರ್ಮಾಪಕರಿಗೆ, ನಿರ್ದೇಶಕರಿಗೆ ಸಿಗುತ್ತಿಲ್ಲ. ಫೋನ್ ಸ್ವಿಚ್ಆಫ್. ಅವರು ಉಳಿದುಕೊಂಡಿರುವ ಹೋಟೆಲ್ಗೆ ಹೋಗಿ ಗಂಟೆಗಟ್ಟಲೆ ಕಾದರೂ ಸಿಕ್ಕಲ್ಲ. ತಾವು ನಟಿಸಿರುವ ಸಿನಿಮಾ ಬಗ್ಗೆ ಒಂದೇ ಒಂದು ಮಾತೂ ಆಡಲ್ಲ. ನಾವು ಪಾರುಲ್ ಅವರಿಗೆ ಯಾವುದೇ ಸಂಭಾವನೆ ಬಾಕಿ ಉಳಿಸಿಕೊಂಡಿಲ್ಲ ಎನ್ನುತ್ತಾರೆ ಚಿತ್ರದ ನಿರ್ದೇಶಕ ವಿನಯ್ ಕೃಷ್ಣ.
ನಿರ್ಮಾಪಕ ತ್ರಿವಿಕ್ರಮ್ ಅವರದ್ದೂ ಇದೇ ಆರೋಪ. ಚಿತ್ರ 4 ವರ್ಷಗಳ ಹಿಂದೆ ಶುರುವಾಯ್ತು. ಆರಂಭದಲ್ಲಿ ಕನ್ನಡದಲ್ಲಷ್ಟೇ ಎಂದುಕೊಂಡಿದ್ದೆವು, ನಂತರ 4 ಭಾಷೆಯಲ್ಲೂ ನಿರ್ಮಿಸಿದೆವು. 15 ಕೋಟಿ ವೆಚ್ಚದ ಸಿನಿಮಾ. ಬಿಡುಗಡೆ ವಿಳಂಬವಾಗಿದ್ದಕ್ಕೆ ಬೇರೆ ಬೇರೆ ಕಾರಣಗಳಿವೆ. ಕಲಾವಿದರು ನಿರ್ಮಾಪಕರಿಗೆ ಈ ರೀತಿ ಅವಮಾನ ಮಾಡಬಾರದು ಎಂದು ಆಕ್ರೋಶ ಹೊರಹಾಕಿದ್ದಾರೆ ತ್ರಿವಿಕ್ರಮ್.
ಚಿತ್ರತಂಡದ ಮುನಿಸು, ಆಕ್ರೋಶವೇನೇ ಇರಲಿ, ಸೀಜರ್ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಉಳಿದದ್ದು ಪ್ರೇಕ್ಷಕರಿಗೆ ಬಿಟ್ಟಿದ್ದು.