`ಹಸು ತಲೆ ಕಡಿಯೋದೂ ಒಂದೇ.. ಹೆತ್ತ ತಾಯಿಯ ತಲೆ ಹಿಡಿಯೋದೂ ಒಂದೇ..' ಇದು ರವಿಚಂದ್ರನ್ ಅಭಿನಯದ ಸೀಜರ್ ಚಿತ್ರದಲ್ಲಿರೋ ಡೈಲಾಗ್. ಈ ಡೈಲಾಗ್ ಹೇಳೋದು ನಾಯಕ ಕ್ರೇಜಿಸ್ಟಾರ್ ರವಿಚಂದ್ರನ್. ಸೀಜರ್ ಚಿತ್ರದ ಟ್ರೇಲರ್‍ನಲ್ಲೂ ಈ ಡೈಲಾಗ್ ಇದೆ. ಆದರೆ, ಈ ಡೈಲಾಗ್ ಈಗ ವಿವಾದಕ್ಕೆ ಕಾರಣವಾಗಿದೆ.
ರವಿಚಂದ್ರನ್ ಅವರಿಗೆ ಈಗ ಮಾರ್ಕೆಟ್ ಇಲ್ಲ. ಹೀಗಾಗಿ ಇಂತಹ ಗಿಮಿಕ್ ಮಾಡಿದ್ದಾರೆ. ಬೇರೆಯವರ ಆಹಾರ ಅಭ್ಯಾಸಗಳ ಬಗ್ಗೆ ಮಾತನಾಡೋ ಹಕ್ಕು ಅವರಿಗೆ ಇಲ್ಲ ಎನ್ನುವುದು ವಕೀಲ ಬಿ.ಟಿ.ವೆಂಕಟೇಶ್ ಎಂಬುವರ ಹೇಳಿಕೆ. ಹಿರಿಯ ನಟರಾದ ರವಿಚಂದ್ರನ್, ಈ ರೀತಿಯ ಡೈಲಾಗ್‍ಗೆ ನೋ ಎನ್ನಬೇಕಿತ್ತು. ಇದು ಕೋಮುಗಲಭೆಗೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಜನವಾದಿ ಸಂಘಟನೆ ನಾಯಕಿ ವಿಮಲಾ.
ಒಬ್ಬ ಹಿಂದೂ ಆಗಿ ಹಸುಗಳನ್ನು ಕೊಲ್ಲಬೇಡಿ ಎಂದು ಹೇಳೋದು ನನ್ನ ಹಕ್ಕು. ಗೋವನ್ನು ನಾವು ಪೂಜಿಸುತ್ತೇವೆ. ಗೋಹತ್ಯೆ ನಿಲ್ಲಿಸಬೇಕು. ಚಿತ್ರದಲ್ಲಿ ನಾವು ಅದನ್ನೇ ಹೇಳಿದ್ದೇವೆ. ಚಿತ್ರದ ಬಗ್ಗೆ ಸೆನ್ಸಾರ್ ಮಂಡಳಿಯೂ ಆಕ್ಷೇಪ ವ್ಯಕ್ತಪಡಿಸಿಲ್ಲ. ಒಂದೇ ಒಂದು ಕಟ್ ಇಲ್ಲದೆ ಪ್ರಮಾಣ ಪತ್ರ ಕೊಟ್ಟಿದೆ. ಇದರಲ್ಲಿ ವಿವಾದವೇ ಇಲ್ಲ ಎಂದಿದ್ದಾರೆ ನಿರ್ದೇಶಕ ವಿನಯ್ ಕೃಷ್ಣ.
ಸೀಜರ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಚುನಾವಣೆ ಹೊಸ್ತಿಲಲ್ಲಿ ನಿಂತಿರುವಾಗ ಇಂತಹ ವಿವಾದವಾದರೆ ಬಿಡುಗಡೆ ಸಾಧ್ಯವೇ ಎಂಬ ಅನುಮಾನವನ್ನೂ ಹುಟ್ಟುಹಾಕಿದೆ. ರವಿಚಂದ್ರನ್ ಜೊತೆ ಚಿತ್ರದಲ್ಲಿ ಚಿರಂಜೀವಿ ಸರ್ಜಾ, ಪ್ರಕಾಶ್ ರೈ ಕೂಡಾ ಇದ್ದಾರೆ.