ರಾಜರಥ ಚಿತ್ರ ಅನಗತ್ಯ ವಿವಾದಕ್ಕೆ ಸಿಲುಕಿ, ನಿರ್ದೇಶಕ, ನಾಯಕ ನಟರು ಕನ್ನಡಿಗರ ಕ್ಷಮೆ ಕೇಳಿದ್ದು ನಿಮಗೆಲ್ಲ ಗೊತ್ತು. ತಮ್ಮ ಚಿತ್ರ ನೋಡದ ಕನ್ನಡಿಗರು ಡ್ಯಾಶ್ -- ಮಕ್ಕಳು ಎಂದು ನಿಂದಿಸಿದ್ದು, ಇಡೀ ವಿವಾದದ ಮೂಲ. ಭಂಡಾರಿ ಸೋದರರು ಮೊದಲು ರಂಗಿತರಂಗದ ಮೂಲಕ ಮ್ಯಾಜಿಕ್ ಸೃಷ್ಟಿಸಿದವರು. ನಂತರ ಬಿಡುಗಡೆಯಾಗಿದ್ದು ಈ ರಾಜರಥ. ಚಿತ್ರವನ್ನು ಗೆಲ್ಲಿಸಲು ಸರ್ಕಸ್ ನಡೆಯುತ್ತಿದೆಯಾ ಎಂದರೆ ಹಾಗೇನಿಲ್ಲ. ಚಿತ್ರ ಥಿಯೇಟರುಗಳಲ್ಲಿ ಚೆನ್ನಾಗಿ ಹೋಗುತ್ತಿದೆ. ಇನ್ನು ಅನೂಪ್ ಭಂಡಾರಿ ಹಾಗೂ ನಿರೂಪ್ ಭಂಡಾರಿ, ಕನ್ನಡ ಎಂದರೆ ಪ್ರೀತಿಸುವ ಹುಡುಗರು. ಅವರ ಸಿನಿಮಾಗಳಲ್ಲಿ ಮರೆಯಾಗುತ್ತಿರುವ ಕನ್ನಡ ಪದಗಳನ್ನು ಹುಡುಕಿ ಹುಡುಕಿ ಸುಂದರ ಸಾಹಿತ್ಯ ಕಟ್ಟುವ ಛಾತಿಯನ್ನು ನೋಡಿದರೆ ಸಾಕು. ಅದು ತಿಳಿಯುತ್ತದೆ. ಹಾಗಾದರೆ, ಇಡೀ ವಿವಾದ ಸೃಷ್ಟಿಯಾಗಿದ್ದು ಎಲ್ಲಿ ಎಂದು ಹೊರಟರೆ ರ್ಯಾಪಿಡ್ ರಶ್ಮಿ ಎಂದ ಆರ್‍ಜೆಯ ಯಡಬೇಸಿತನ ಕಣ್ಣಿಗೆ ರಾಚುತ್ತೆ.
ಆರ್‍ಜೆ ರ್ಯಾಪಿಡ್ ರಶ್ಮಿ ತಮ್ಮ ಶೋಗಳನ್ನು ಮಾಡೋದೇ ಹಾಗೆ. ಆಕೆ ತಮ್ಮ ಶೋಗಳಲ್ಲಿ ಈ ರೀತಿಯ ಅಸಭ್ಯ ಉತ್ತರಗಳು ಬರುವಂತಹ ಪ್ರಶ್ನೆಗಳನ್ನೇ ಕಾಯಿನ್ ಮಾಡುವ ಆ್ಯಂಕರ್. ಅಂಥಾದ್ದೊಂದು ಶೋನಲ್ಲಿ ಕುರಿಗಳಾದವರು ಈ ಭಂಡಾರಿ ಬ್ರದರ್ಸ್. ಅವರಿಗೆ ಈ ರ್ಯಾಪಿಡ್ ರಶ್ಮಿ (ರಗಳೆ ರಶ್ಮಿ ಎನ್ನೋಣವೇ) ಕೇಳಿರುವುದೇ ಅಂಥಾ ಪ್ರಶ್ನೆ. ನಿಮ್ಮ ಸಿನಿಮಾ ನೋಡದವರನ್ನು ಯಾವ ಪದದಲ್ಲಿ ಬಯ್ಯುತ್ತೀರಿ ಅನ್ನೋದು. ಬಯ್ಯೋದೇ ಟಾಸ್ಕ್.
ಅಂದಹಾಗೆ ಈ ಶೋ ಪ್ರಸಾರವಾಗಿದ್ದು ಈಗಲ್ಲ. ಮಾರ್ಚ್ 21ರಂದು. ಮಾರ್ಚ್ 21ರಂದು ಪ್ರಸಾರವಾದ ಲೈವ್ ಕಾರ್ಯಕ್ರಮದ ಎಡಿಟೆಡ್ ವಿಡಿಯೋ ಏಪ್ರಿಲ್ 1ನೇ ತಾರೀಕು ಹೊರಬಿದ್ದಿದ್ದು ಹೇಗೆ..? ಇದರ ಹಿಂದೆ ಚಿತ್ರತಂಡಕ್ಕೆ ಕೆಟ್ಟ ಹೆಸರು ತರುವ ಹುನ್ನಾರ ಇದೆಯಾ..? ಪ್ರತಿಕ್ರಿಯೆ ನೀಡೋಕೆ ರಗಳೆ ರಶ್ಮಿ ಯಾರಿಗೂ ಸಿಗುತ್ತಿಲ್ಲ.
ಅಂದಹಾಗೆ ಇದೇ ರ್ಯಾಪಿಡ್ ರಶ್ಮಿ ತಮ್ಮ ಡ್ಯಾಶ್ ಡ್ಯಾಶ್ ಟಾಸ್ಕ್‍ನಲ್ಲಿ ಕಲಾವಿದರೊಬ್ಬರಿಗೆ ನಿಮ್ಮ ಇಷ್ಟದ ಪೋರ್ನ್ ಸ್ಟಾರ್ ಯಾರು ಎಂದು ಕೇಳಿದ್ದರು. ಆಗ ಆ ಕಲಾವಿದರ ತಾಯಿ ಅವರ ಎದುರಿಗೇ ಇದ್ದರು. ಆಕೆ ನಡೆಸುವ ಕಾರ್ಯಕ್ರಮ ಎಂಥದ್ದು. ಭಾಷೆ, ಕಾನ್ಸೆಪ್ಟ್ ಎಂಥದ್ದು ಎಂದು ಅರ್ಥವಾಗೋಕೆ ಇದೊಂದು ಉದಾಹರಣೆ ಸಾಕು.
ಇದು ಹೊಸದೇನೂ ಅಲ್ಲ. ಕನ್ನಡ ಚಿತ್ರಗಳಿಗೆ ಈ ರೀತಿ ನೆಗೆಟಿವ್ ಪಬ್ಲಿಸಿಟಿ ಮಾಡೋದು ಈಕೆಗೆ ಚಟವೇ ಆಗಿಬಿಟ್ಟಿದೆ. ಹೀಗಾಗಿಯೇ ಈಕೆಯ ಶೋಗಳಿಗೆ ಕನ್ನಡ ಚಿತ್ರ ತಂಡದವರು ಬಹಿಷ್ಕರಿಸುವಂತೆ ಫಿಲಂ ಚೇಂಬರ್ ಕರೆ ಕೊಟ್ಟಿದೆ. ನಿಷೇಧಿಸುವುದು ಉಚಿತವಲ್ಲ ಎಂಬ ಕಾರಣಕ್ಕೆ. ಇಷ್ಟಕ್ಕೂ ಆ ಶೋ ಕನ್ನಡ ಚಿತ್ರಗಳ ಪ್ರಚಾರಕ್ಕೆ ಚಾನೆಲ್ ನಡೆಸುವ ಕಾರ್ಯಕ್ರಮ ಅಲ್ಲ. ಚಿತ್ರತಂಡದವರು ಹಣ ಕೊಟ್ಟರಷ್ಟೇ ನಡೆಯುವ ಕಾರ್ಯಕ್ರಮ. ಚಿತ್ರದ ಪ್ರಚಾರಕ್ಕೆ ಹಣವನ್ನೂ ಪಡೆದು, ಚಿತ್ರತಂಡದ ಮಾನ ಮರ್ಯಾದೆಯನ್ನು ಹರಾಜಿಗಿಡುವ ಕಾರ್ಯಕ್ರಮ ಇದೊಂದೇ ಇರಬೇಕು.
ಇಷ್ಟೆಲ್ಲ ಆದ ಮೇಲೆ ರಶ್ಮಿ ಸಂದರ್ಶನದ ಪೂರ್ಣ ವಿಡಿಯೋವನ್ನು ಫೇಸ್‍ಬುಕ್‍ನಲ್ಲಿ ಹಾಕಿ ತಾನು ತಪ್ಪು ಮಾಡಿಲ್ಲ. ಹೀಗಿದ್ದರೂ ತಪ್ಪಾಗಿದ್ದರೆ ಕ್ಷಮೆ ಇರಲಿ ಎಂದಿದ್ದಾರೆ ರಶ್ಮಿ. ಆದರೆ, ಡ್ಯಾಶ್ ಪ್ರಶ್ನೆಗಳಲ್ಲಿ ದ್ವಂದ್ವಾರ್ಥವೇ ಹೆಚ್ಚು ಧ್ವನಿಸುತ್ತೆ. ಏಕೆ ಅನ್ನೋದನ್ನು ಆಕೆಯೇ ಹೇಳಬೇಕು.
Related Articles :-