ಪ್ರತಿ ದಿನ ಶೇವ್ ಮಾಡಬೇಕು. ಒಂದ್ಸಲ ಮೇಕಪ್ ಹಾಕಿಸಿಕೊಂಡ್ರೆ ಇಡೀ ದಿನ ಅದೇ ಮೇಕಪ್‍ನಲ್ಲಿರಬೇಕು. ಪ್ಯಾಕಪ್ ಆಗುವವರೆಗೆ ಮೇಕಪ್ ತೆಗೆಯೋಹಾಗಿಲ್ಲ. ಅಬ್ಬಾ.. ಈ ಕಷ್ಟ ಯಾವ ಗಂಡಸಿಗೂ ಬರಬಾರದು.. ಹೀಗಂತ ತಮ್ಮ ಅನುಭವ ಹೇಳಿಕೊಂಡಿರೋದು ಕುರಿ ಪ್ರತಾಪ್. ಇದೇ ವಾರ ತೆರೆಗೆ ಬರುತ್ತಿರುವ ನಂಜುಂಡಿ ಕಲ್ಯಾಣದಲ್ಲಿ ಹೀರೋನ ಹೆಂಡತಿಯಾಗಿ ನಟಿಸಿರುವ ಕುರಿ ಪ್ರತಾಪ್, ಸ್ತ್ರೀವೇಷದ ಕಷ್ಟಗಳನ್ನೆಲ್ಲ ಹೇಳಿಕೊಂಡಿದ್ದಾರೆ.
ನಂಜುಂಡಿ ಕಲ್ಯಾಣದಲ್ಲಿ ಕುರಿ ಪ್ರತಾಪ್ ಅವರ ಪಾತ್ರದ ಹೆಸರು ಬ್ಯಾಂಕಾಕ್ ಮಲ್ಲಿಕಾ. ಹೀರೋ ತನುಷ್ ಬ್ಯಾಂಕಾಕ್‍ನಲ್ಲಿ ಮಲ್ಲಿಕಾರನ್ನು ಮದುವೆಯಾಗ್ತಾರೆ. ಅದು ಮದುವೆ ಇಷ್ಟವಿಲ್ಲದ ಕಾರಣಕ್ಕೆ. ಇಷ್ಟವಿಲ್ಲದ ಮದುವೆ ತಪ್ಪಿಸಿಕೊಳ್ಳಲು, ಬ್ಯಾಂಕಾಕ್ ಮಲ್ಲಿಕಾ ಅವರ ಜೊತೆ ಮದುವೆಯಾಗುವ ನಾಯಕ, ನಂತರ ಮದುವೆಯಾಗಬೇಕು ಎಂದುಕೊಂಡಾಗ ಶುರುವಾಗುವುದೇ ಕಲ್ಯಾಣದ ಸಂಕಟ. ಈ ವಾರ ತೆರೆಗೆ ಬರುತ್ತಿರುವ ನಂಜುಂಡಿ ಕಲ್ಯಾಣದಲ್ಲಿ ನಗೋಕೆ ಬೇಜಾನ್ ಕಾರಣಗಳಿವೆ. ತನುಷ್, ಶ್ರಾವ್ಯ ಅಭಿನಯದ ಚಿತ್ರದಲ್ಲಿ ಮದುವೆಯೇ ಕೇಂದ್ರಬಿಂದು.