2018ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾರರಿಗೆ ಜಾಗೃತಿ ಮೂಡಿಸಲು ಚುನಾವಣಾ ಆಯೋಗ ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ಜವಾಬ್ದಾರಿ ನೀಡಿದೆ. ಅಂಥಾದ್ದೊಂದು ಹೊಣೆ ನನಗೆ ಸಿಕ್ಕಿರುವ ಅದೃಷ್ಟ ಎನ್ನುತ್ತಿರುವ ಯೋಗರಾಜ್ ಭಟ್, ಮತದಾನ ಜಾಗೃತಿಗಾಗಿ ವಿಶೇಷ ಗೀತೆಯೊಂದನ್ನು ಬರೆದು ಚಿತ್ರೀಕರಿಸುತ್ತಿದ್ದಾರೆ.
ಎಷ್ಟೋ ವರ್ಷಗಳ ಹಿಂದೆ ವಿಧಾನಸೌಧದ ಎದುರು ಯಾವುದೇ ಚಿತ್ರೀಕರಣವನ್ನು ನಿಷೇಧಿಸಲಾಗಿತ್ತು. ಸುದ್ದಿ ಮಾಧ್ಯಮಗಳಿಗೆ ಬಿಟ್ಟರೆ, ಬೇರ್ಯಾರಿಗೂ ವಿಶೇಷ ಚಿತ್ರೀಕರಣಕ್ಕೆ ಅವಕಾಶ ಇರಲಿಲ್ಲ. ಈಗ ಅಂತಾದ್ದೊಂದು ವಿಶೇಷ ಚಿತ್ರೀಕರಣಕ್ಕೆ ಭಟ್ಟರಿಗೆ ಅವಕಾಶ ಸಿಕ್ಕಿದೆ.
ವಿಭಿನ್ನ ಪರಿಕಲ್ಪನೆಯ ಈ ಗೀತೆ, ಪ್ರತಿಯೊಬ್ಬರಿಗೂ ಮತದಾನ ಮಾಡಲೇಬೇಕೆಂಬ ಉತ್ಸಾಹ ನೀಡಲಿದೆ. ಮತದಾನದಿಂದ ದೂರವೇ ಉಳಿದಿರುವ ಸಮೂಹದಲ್ಲಿ ಶೇ.5ರಷ್ಟಾದರೂ ಜನ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದರೆ, ನನ್ನ ಶ್ರಮ ಸಾರ್ಥಕ ಎಂದಿದ್ದಾರೆ ಯೋಗರಾಜ್ ಭಟ್.
ಒಟ್ಟು 4 ನಿಮಿಷದ ಈ ಹಾಡಿಗೆ ಸಂಗೀತ ನೀಡಿರುವುದು ಹರಿಕೃಷ್ಣ. ಹಾಡಿರುವುದು ವಿಜಯಪ್ರಕಾಶ್. ನೃತ್ಯ ಸಂಯೋಜನೆ ಇಮ್ರಾನ್ ಸರ್ದಾರಿಯಾ ಅವರದ್ದು. ವಿಧಾನಸೌಧದಲ್ಲಷ್ಟೇ ಅಲ್ಲ, ರಾಜ್ಯದ 30 ಜಿಲ್ಲೆಗಳಲ್ಲೂ ಈ ಹಾಡಿಗೆ ಚಿತ್ರೀಕರಣ ನಡೆಯಲಿದೆ.
ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಈ ಚುನಾವಣಾ ಗೀತೆ, ಆಯೋಗದ ಧ್ಯೇಯ ಹಾಗೂ ನೈತಿಕತೆ ಅನುಸಾರ ಇದೆ ಎಂದಿದ್ದಾರೆ.
ಮತದಾನ ಜಾಗೃತಿಗಾಗಿ ಬಹುಶಃ ದೇಶದಲ್ಲೇ ಪ್ರಥಮ ಬಾರಿಗೆ ಇಂಥಾದ್ದೊಂದು ವಿಶೇಷ ಗೀತೆ ಸಂಯೋಜಿಸುತ್ತಿರುವುದು ಚುನಾವಣಾ ಆಯೋಗದ ಹೆಗ್ಗಳಿಕೆ.