ರಂಗಿತರಂಗ.. ನಂತರ ರಾಜರಥ.. ಮುಂದೇನು..? ಇದು ಹೀರೋ ನಿರೂಪ್ ಭಂಡಾರಿಗೆ ಅಭಿಮಾನಿಗಳೇ ಕೇಳ್ತಿರೋ ಪ್ರಶ್ನೆ. ಸದ್ಯಕ್ಕೆ ನಿರೂಪ್ ಭಂಡಾರಿ ರಾಕ್‍ಲೈನ್ ಪ್ರೊಡಕ್ಷನ್ಸ್‍ನ ಹೊಸ ಸಿನಿಮಾದಲ್ಲಿ ಬ್ಯುಸಿ. ಆ ಚಿತ್ರದಲ್ಲಿ ನಿರೂಪ್ ಸಂಪೂರ್ಣ ಮಹಿಳೆಯರ ಸೈನ್ಯದಲ್ಲಿಯೇ ನಟಿಸುತ್ತಿರುವುದು ವಿಶೇಷ.
ಆ ಚಿತ್ರದಲ್ಲಿ ನಿರೂಪ್‍ಗೆ ಜೋಡಿಯಾಗಿರೋದು ರಾಧಿಕಾ ಪಂಡಿತ್. ಇನ್ನು ನಿರ್ದೇಶಕಿ ಪ್ರಿಯಾ. ಅವರು ಮಣಿರತ್ನಂ ಜೊತೆ ಅಸಿಸ್ಟೆಂಟ್ ಆಗಿದ್ದವರು. ಇದು ಅವರಿಗೆ ಮೊದಲ ಸಿನಿಮಾ. ಚಿತ್ರದ ಸಿನಿಮಾಟೋಗ್ರಾಫರ್ ಪ್ರೀತಾ ಜಯರಾಂ.
ಹೀಗೆ ಮಹಿಳಾ ಸೈನ್ಯದ ಜೊತೆಯಲ್ಲಿಯೇ ಕೆಲಸ ಮಾಡಿದ ನಿರೂಪ್‍ಗೆ ಕೆಲಸದ ವಿಚಾರದಲ್ಲಿ ಯಾವುದೇ ವ್ಯತ್ಯಾಸ ಕಾಣಲಿಲ್ಲವಂತೆ. ತಂಡದಲ್ಲಿ ಕೆಲಸ ಮಾಡಿದವರೆಲ್ಲರೂ ಅನುಭವಿಗಳೇ. ಅವರಿಗೆ ಹೋಲಿಸಿದರೆ ನಾನೇ ಹೊಸಬ. ಅವರೆಲ್ಲರಿಂದ ಸಾಕಷ್ಟು ಕಲಿತಿದ್ದೇನೆ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ ನಿರೂಪ್ ಭಂಡಾರಿ. ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ.