ಭರ್ಜರಿ. ಧ್ರುವ ಸರ್ಜಾಗೆ ಹ್ಯಾಟ್ರಿಕ್ ಹಿಟ್ ಕೊಟ್ಟ ಸಿನಿಮಾ. ಧ್ರುವ, ರಚಿತಾ ರಾಮ್, ಹರಿಪ್ರಿಯಾ ನಟಿಸಿರುವ ಚಿತ್ರ ಸೂಪರ್ ಹಿಟ್ ಆಗಿ, ಶತದಿನೋತ್ಸವ ಆಚರಿಸಿತ್ತು. ಆದರೆ, ಚಿತ್ರದ ಬಿಡುಗಡೆಗೂ ಮೊದಲಿನಿಂದ ಚಿತ್ರತಂಡ ಹಾಗೂ ನಿರ್ಮಾಪಕರ ಮಧ್ಯೆ ತಿಕ್ಕಾಟ ನಡೆದೇ ಇತ್ತು. ಚಿತ್ರತಂಡ, ಭರ್ಜರಿ ಸಿನಿಮಾ 50 ಕೋಟಿ ಕಲೆಕ್ಷನ್ ಮಾಡಿದೆ ಎಂದಿದ್ದರೆ, ನಿರ್ಮಾಪಕ ಶ್ರೀನಿವಾಸ್.. ಅದೆಲ್ಲ ಸುಳ್ಳು. ಸಂಭಾವನೆ ಹೆಚ್ಚಿಸಿಕೊಳ್ಳೋಕೆ ಸುಳ್ಳು ಹೇಳ್ತಿದ್ದಾರೆ ಎಂದಿದ್ದರು.
ಈಗ ನಿರ್ಮಾಪಕ ಕನಕಪುರ ಶ್ರೀನಿವಾಸ್, ಭರ್ಜರಿ ಚಿತ್ರದ ಶತದಿನ ಸಮಾರಂಭ ಏರ್ಪಡಿಸಿದ್ದಾರೆ. ಆ ಕಾರ್ಯಕ್ರಮಕ್ಕೆ ಸಚಿವ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್, ಶಾಸಕರಾದ ಆರ್.ವಿ.ದೇವರಾಜ್, ವಿತರಕ ಭಾಷಾ ಮೊದಲಾದವರು ಬರುತ್ತಿದ್ದಾರೆ. ಮಾರ್ಚ್ 30ನೇ ತಾರೀಕು ಕನಕಪುರ ರಸ್ತೆಯ ಮುನೇಶ್ವರ ದೇವಸ್ಥಾನದ ಬಳಿ ಶತದಿನೋತ್ಸವ ಕಾರ್ಯಕ್ರಮ ನಡೆಯಲಿದೆ.
ಆದರೆ, ಆ ಕಾರ್ಯಕ್ರಮಕ್ಕೆ ಚಿತ್ರತಂಡದವರೇ ಹೋಗುತ್ತಿಲ್ಲ. ನಾಯಕ ನಟ ಧ್ರುವ ಸರ್ಜಾ ಸೇರಿದಂತೆ ಚಿತ್ರತಂಡದ ಎಲ್ಲ ಸದಸ್ಯರೂ ಈ ಸಮಾರಂಭದಿಂದ ದೂರವೇ ಉಳಿದಿದ್ದಾರೆ. ನಿರ್ಮಾಪಕರು ಅಷ್ಟರಮಟ್ಟಿಗೆ ಚಿತ್ರತಂಡದವರ ಜೊತೆ ಬಾಂಧವ್ಯ ಕೆಡಿಸಿಕೊಂಡಿದ್ದಾರಾ..? ಚಿತ್ರತಂಡದವರನ್ನು ಕೇಳಿದರೆ ಒಬ್ಬೊಬ್ಬರ ಬಳಿಯೂ ಮೈಲುದ್ದದ ದೂರುಗಳಿವೆ. ಸಿನಿಮಾ ಸದಸ್ಯರೇ ಇಲ್ಲದೆ ಸಿನಿಮಾ ಶತದಿನೋತ್ಸವ ನಡೆಯುತ್ತಾ..? ವೇಯ್ಟ್ ಮಾಡಿ.