ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಸರ್ಕಾರಿ ಸ್ಕೂಲ್ ಮೇಷ್ಟ್ರಾಗುತ್ತಿದ್ದಾರೆ. ಪ್ರಮೋದ್ ಚಕ್ರವರ್ತಿ ನಿರ್ದೇಶನದ ಹೊಸ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರದ್ದು ಟೀಚರ್ ಪಾತ್ರ. ಒಬ್ಬ ಶಿಕ್ಷಕನಾಗಿ ಮಕ್ಕಳಿಗೆ ವಿದ್ಯೆ ಕಲಿಸುವ ಜೊತೆಗೆ, ಸಮಾಜವನ್ನೂ ತಿದ್ದುವ ಮೇಷ್ಟ್ರಾಗಿ ನಟಿಸುತ್ತಿದ್ದಾರೆ ಶಿವರಾಜ್ ಕುಮಾರ್.
ಚಿತ್ರದಲ್ಲಿ ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಗಳ ನಡುವಿನ ತಾರತಮ್ಯದ ಕಥೆಯೂ ಇದೆ. ಚಿತ್ರದಲ್ಲಿ ಅದೇ ಹೈಲೈಟ್. ಒಬ್ಬ ಶಿಕ್ಷಕ ತನ್ನ ಬಳಿಗೆ ಬರುವ ವಿದ್ಯಾರ್ಥಿಗಳಿಗಷ್ಟೇ ಶಿಕ್ಷಕ ಅಲ್ಲ, ಇಡೀ ಸಮಾಜವನ್ನೇ ತಿದ್ದುವ ಜವಾಬ್ದಾರಿ ಅವನ ಮೇಲಿರುತ್ತೆ ಅಂತಾರೆ ಶಿವರಾಕುಮಾರ್. ಚಿತ್ರದಲ್ಲಿರುವುದು ಅಂತಹುದೇ ಪಾತ್ರ.
ಹಲವು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ, ಪ್ರಯೋಗಗಳಿಗೆ ತಮ್ಮನ್ನು ಒಗ್ಗಿಸಿಕೊಂಡಿರುವ ಶಿವರಾಜ್ ಕುಮಾರ್‍ಗೆ ಶಿಕ್ಷಕನ ಪಾತ್ರ ಹೊಸದು. ಚಿತ್ರಕ್ಕಿನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಟಗರು ಚಿತ್ರಕ್ಕೆ ಡೈಲಾಗ್ ಬರೆದಿದ್ದ ಮಾಸ್ತಿ, ಈ ಚಿತ್ರಕ್ಕೂ ಡೈಲಾಗ್ ಬರೆಯುತ್ತಿದ್ದಾರೆ. ಚಿತ್ರ ಶುರುವಾಗುವ ಮುನ್ನ ಸಿದ್ಧತೆ ಮಾಡಿಕೊಳ್ಳುವುದರಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.