ಆರ್ಯ. ತಮಿಳು ಚಿತ್ರರಂಗದ ಸ್ಟಾರ್ ನಟ. ಇವರು ಕನ್ನಡದಲ್ಲಿ ನಟಿಸಿರುವ ಮೊದಲ ಸಿನಿಮಾ ರಾಜರಥ. ಇದೇ ಶುಕ್ರವಾರ ತೆರೆಗೆ ಬರುತ್ತಿರುವ ರಾಜರಥ ಚಿತ್ರದಲ್ಲಿ ಆರ್ಯ ಅತ್ಯಂತ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತಮ್ಮ ಮೊದಲ ಕನ್ನಡ ಚಿತ್ರದ ಅನುಭವವನ್ನೂ ಖುಷಿಯಿಂದ ಹೇಳಿಕೊಂಡಿದ್ದಾರೆ ಆರ್ಯ.
ರಂಗಿತರಂಗ ನೋಡಿದಾಗ ಇಷ್ಟವಾಯ್ತು. ನಂತರ ಅನೂಪ್ ಅವರ ತಂದೆಯ ಸ್ನೇಹಿತರೊಬ್ಬರ ಮೂಲಕ ಚಿತ್ರದ ಬಗ್ಗೆ ನನ್ನ ಮೆಚ್ಚುಗೆ ತಿಳಿಸಿದೆ. ಅದಾದ ಮೇಲೆ ಅನೂಪ್ ನನಗೆ ಫೋನ್ ಮಾಡಿ, ನನ್ನ ಚಿತ್ರದಲ್ಲಿ ನೀವು ನಟಿಸಬೇಕು ಎಂದಾಗ ನಿಜಕ್ಕೂ ಥ್ರಿಲ್ ಆಗಿಬಿಟ್ಟೆ. ಓಕೆ, ಬ್ರದರ್. ಡನ್ ಎಂದಷ್ಟೇ ಹೇಳಿದ್ದೆ ಎಂದು ನೆನಪಿಸಿಕೊಳ್ತಾರೆ ಆರ್ಯ.
ಚಿತ್ರದಲ್ಲಿ ನಟಿಸುವಾಗ ನಾನು ಒಬ್ಬ ಹೊಸಬ ಎಂದೇ ಫೀಲ್ ಆಯ್ತು. ಕನ್ನಡದಲ್ಲಿಯೂ ನಟಿಸಬೇಕು ಎನ್ನುವ ಕನಸು, ಈ ಚಿತ್ರದ ಮೂಲಕ ಈಡೇರಿದೆ. ಅನೂಪ್ ಅವರಲ್ಲಿ ಒಂದಿಷ್ಟು ಹೊಸತನವಿದೆ. ವಿಭಿನ್ನತೆಯಿದೆ. ಚಿತ್ರದಲ್ಲಿ ನನ್ನ ಪಾತ್ರವನ್ನು ತುಂಬಾ ಚೆನ್ನಾಗಿ ತೋರಿಸಲಾಗಿದೆ ಎಂದಿದ್ದಾರೆ ಆರ್ಯ.
ಏನು ನಿಮ್ಮ ಪಾತ್ರ ಎಂದರೆ, ನಿರ್ದೇಶಕರು ಇದರ ಬಗ್ಗೆ ಬಾಯಿಬಿಡಬೇಡಿ ಎಂದಿದ್ದಾರೆ. ಹಾಗಾಗಿ ನಾನು ಬಾಯಿ ಹೊಲಿದುಕೊಂಡಿದ್ದೇನೆ ಅಂತಾರೆ ಆರ್ಯ.
ತಮಿಳು ಹಾಗೂ ಕನ್ನಡದ ಮಧ್ಯೆ ಬಹಳಷ್ಟು ಹೋಲಿಕೆಗಳಿವೆ. ಇದು ಕನ್ನಡ ಗೊತ್ತಿಲ್ಲದೇ ಇದ್ದರೂ, ನನಗೆ ಡೈಲಾಗ್ ಹೇಳೋಕೆ ಸಹಾಯ ಮಾಡ್ತು ಎಂದು ಡೈಲಾಗ್ ಡೆಲಿವರಿ ಕಷ್ಟ ಹೇಳಿಕೊಂಡಿದ್ದಾರೆ ಆರ್ಯ. ಆರ್ಯ ಅವರಷ್ಟೇ ಅಲ್ಲ, ಇಡೀ ಚಿತ್ರತಂಡ ಎದುರು ನೋಡುತ್ತಿರುವುದು ಅಭಿಮಾನಿಗಳನ್ನ. ಶುಕ್ರವಾರ ರಿಲೀಸ್ ಆಗುವ ಸಿನಿಮಾ, ಜನರಿಗೆ ಇಷ್ಟವಾಗಿಬಿಟ್ಟರೆ, ರಾಜರಥದವರ ಖುಷಿಗೆ ನೋ ಲಿಮಿಟ್ಸ್.