ರಾಜರಥ ಚಿತ್ರದ ಟೈಟಲ್ ರೋಲ್ ಯಾರು..? ಹೀರೋ ನಿರೂಪ್ ಭಂಡಾರಿ ಅಲ್ಲ. ಅದು ಒಂದು ಬಸ್ಸು. ಆ ಬಸ್ಸಿನ ಹೆಸರೇ ರಾಜರಥ. ಆ ರಾಜರಥದ ಧ್ವನಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ಅಂದರೆ ರಿಯಲ್ ರಾಜರಥ ಪುನೀತ್ ಅವರೇ. ತಮ್ಮ ಚಿತ್ರಕ್ಕೆ ಧ್ವನಿ ನೀಡಿ ಸಹಕರಿಸಿದ ಪುನೀತ್‍ಗೆ ರಾಜರಥ ಚಿತ್ರತಂಡ ಪವರ್‍ಸ್ಟಾರ್ ಮಿಕ್ಸ್ ಉಡುಗೊರೆ ನೀಡಿದೆ.
ಪುನೀತ್ ರಾಜ್‍ಕುಮಾರ್, ಬಾಲ್ಯದಲ್ಲೇ ನಟನಾಗಿ ಮಿಂಚಿದವರು. ರಾಷ್ಟ್ರ ಪ್ರಶಸ್ತಿ ಪುರಸ್ಕಾರ ಪಡೆದವರು. ಹೀರೋ ಆದ ಮೇಲೆ ಸೂಪರ್ ಸ್ಟಾರ್ ಆದವರು. ಆದರೆ, ತಾನೊಬ್ಬ ಸ್ಟಾರ್ ಎಂಬ ಯಾವ ಹಮ್ಮು ಬಿಮ್ಮೂ ಇಲ್ಲದೆ ಬೆರೆಯುವ ಪುನೀತ್‍ಗೆ ಚಿತ್ರತಂಡ ಕೊಟ್ಟ ಉಡುಗೊರೆಯೇ ಪವರ್‍ಸ್ಟಾರ್ ಮಿಕ್ಸ್. ಅದು ಹುಟ್ಟುಹಬ್ಬದ ಕೊಡುಗೆ.
ಪುನೀತ್ ಅಭಿನಯದ ಎಲ್ಲ ಚಿತ್ರಗಳ ಹೆಸರು ಮತ್ತು ಆ ಚಿತ್ರದಲ್ಲಿನ ಪುನೀತ್ ಲುಕ್ ಇರುವ ಫೋಟೋ ಬಳಸಿ ಸೃಷ್ಟಿಸಲಾಗಿರುವ ಪುಟ್ಟ ವಿಡಿಯೋದಲ್ಲಿ ರಾಜರಥ ಚಿತ್ರದ ಬಸ್ ಡೈಲಾಗುಗಳಿವೆ.
ರಾಜರ ವಂಶ ನಮ್ದು.. ನನ್ ಹೆಸರೇ ರಾಜರಥ ಅನ್ನೋ ಡೈಲಾಗ್‍ನೊಂದಿಗೆ ಎಂಡ್ ಆಗುವ ಈ ಪುಟ್ಟ ವಿಡಿಯೋ ಆನ್‍ಲೈನ್‍ನಲ್ಲಿ ಮ್ಯಾಜಿಕ್ ಸೃಷ್ಟಿಸಿದೆ. ಮೂರೇ ದಿನದಲ್ಲಿ ಲಕ್ಷಾಂತರ ಹಿಟ್ಸ್ ಗಿಟ್ಟಿಸಿರುವ ಪವರ್‍ಸ್ಟಾರ್ ಮಿಕ್ಸ್, ಅಭಿಮಾನಿಗಳಿಗೆ ಥ್ರಿಲ್ ಕೊಟ್ಟಿದೆ.
ರಾಜರಥದಲ್ಲಿ ನಟನಾಗಿ ಅಲ್ಲದೆ, ಧ್ವನಿಯಾಗಿ ನಟಿಸಿರುವ ಪುನೀತ್, ರಾಜರಥದ ಹೀರೋಗಳಲ್ಲಿ ಒಬ್ಬರು ಎಂದರೆ ತಪ್ಪಾಗಲಿಕ್ಕಿಲ್ಲ. ರಾಜರಥ ಚಿತ್ರವನ್ನು ನೋಡೋಕೆ, ಅವರ ಅಭಿಮಾನಿಗಳೂ ಈಗ ತುದಿಗಾಲಲ್ಲಿ ಕಾಯುವಂತಾಗಿದೆ.