ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್, 43ನೇ ವರ್ಷಕ್ಕೆ ಕಾಲಿಟ್ಟ ಸಂಭ್ರಮದ ಗಳಿಗೆಯನ್ನು ಅಭಿಮಾನಿಗಳು ಅಕ್ಷರಶಃ ಹಬ್ಬವಾಗಿಸಿಬಿಟ್ಟಿದ್ದಾರೆ. ಯುಗಾದಿಗೆ ಮುನ್ನಾ ದಿನ ನಡೆದ ಪುನೀತ್ ಹುಟ್ಟುಹಬ್ಬದ ಸಂಭ್ರಮ ಹೆಚ್ಚೂ ಕಡಿಮೆ ಅಪ್ಪು ಹಬ್ಬವಾಗಿ ಹೋಗಿದೆ.
ಪುನೀತ್ ಅವರನ್ನು ನೋಡೋಕೆ ನೂರಾರು ಕಿಲೋಮೀಟರ್ ದೂರದಿಂದ ಬಂದಿದ್ದ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಂಡು ಖುಷಿಪಟ್ಟರು. ಸೆಲ್ಫೀ ತೆಗೆದುಕೊಂಡು ಸಂಭ್ರಮಿಸಿದರು. ಸದಾಶಿವನಗರ ಠಾಣೆ ಪೊಲೀಸರು ಪುನೀತ್ ಅವರಿಗಾಗಿಯೇ ವಿಶೇಷ ಕೇಕ್ ತೆಗೆದುಕೊಂಡು ಶುಭಾಶಯ ಕೋರಿದರು.
ಪುನೀತ್‍ಗೆ ಜಗ್ಗೇಶ್ ಹುಟ್ಟುಹಬ್ಬದ ಶುಭಾಶಯ ಕೋರಿದರೆ, ಇದೇ ದಿನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಜಗ್ಗೇಶ್‍ಗೆ ಅಭಿಮಾನಿಯಾಗಿ ಪುನೀತ್ ರಾಜ್‍ಕುಮಾರ್ ಶುಭ ಕೋರಿದರು. ಶಿವಣ್ಣ ಮನೆಗೇ ಆಗಮಿಸಿ, ತಮ್ಮನ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದರು. ಕಿಚ್ಚ ಸುದೀಪ್, ಸಂತೋಷ್ ಆನಂದ್‍ರಾಮ್, ಹೊಂಬಾಳೆ ಪ್ರೊಡಕ್ಷನ್ಸ್ ಸೇರಿದಂತೆ ಚಿತ್ರರಂಗದ ಹಿರಿ ಕಿರಿಯ ಕಲಾವಿದರು, ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು.. ಕಿಚ್ಚ ಸುದೀಪ್‍ಗೆ ಶುಭ ಹಾರೈಸಿದ್ರು.
ಒಳ್ಳೆ ಹುಡುಗ ಪ್ರಥಮ್, ಪುನೀತ್‍ಗೆ ಚಿನ್ನದ ವೆಂಕಟೇಶ್ವರನ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದರೆ, ಶಿವಣ್ಣ ಹಾಗೂ ಪುನೀತ್ ಅಭಿಮಾನಿಗಳು ಎದೆಯ ಮೇಲೆ ಅಪ್ಪು ಚಿತ್ರ ಬಿಡಿಸಿಕೊಂಡು ಸಂಭ್ರಮಿಸಿದರು. ಪುನೀತ್ ರಾಜ್‍ಕುಮಾರ್, ಅಂಧಮಕ್ಕಳ ಜೊತೆ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡರು.