ರಾಜರಥ ಚಿತ್ರದ ಹೀರೋ ನಿರೂಪ್ ಭಂಡಾರಿಗೆ ಇದು ಕೇವಲ 2ನೇ ಸಿನಿಮಾ. ನಿರ್ದೇಶಕ ಅನೂಪ್ ಭಂಡಾರಿಗೂ ಇದು 2ನೇ ಸಿನಿಮಾ. ಹೀಗಿದ್ದರೂ ಚಿತ್ರದ ಬಗ್ಗೆ ನಿರೀಕ್ಷೆಗಳು ಮೌಂಟ್ ಎವರೆಸ್ಟ್ ರೇಂಜ್‍ನಲ್ಲಿರೋಕೆ ಕಾರಣಗಳಿವೆ.
ರಾಜರಥದಲ್ಲಿರೋದು ರಂಗಿತರಂಗ ಟೀಂ. ಬಾಹುಬಲಿಗೆ ಸಡ್ಡು ಹೊಡೆದು ಗೆದ್ದಿದ್ದ ಚಿತ್ರತಂಡವಾಗಿರೋ ಕಾರಣ, ಚಿತ್ರದ ಮೇಲೆ ನಿರೀಕ್ಷೆ ಸಹಜವಾಗಿಯೇ ಇದೆ.
ಚಿತ್ರಕ್ಕೆ ಧ್ವನಿ ನೀಡಿರೋದು ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್. ರಾಜರಥ ಎನ್ನುವ ಬಸ್‍ನ ಪಾತ್ರಕ್ಕೆ ಧ್ವನಿಯಾಗಿದ್ದಾರೆ ಪುನೀತ್. ಬಸ್‍ನ ಹೆಸರನ್ನೇ ಚಿತ್ರಕ್ಕಿಟ್ಟಿರುವ ಕಾರಣ, ಕುತೂಹಲ ಜಾಸ್ತಿಯೇ ಇದೆ.
ಇದೇ ಮೊದಲ ಬಾರಿಗೆ ಚಿತ್ರದಲ್ಲಿ ತಮಿಳು ನಟ ಆರ್ಯ ನಟಿಸಿದ್ದಾರೆ. ಕನ್ನಡದಲ್ಲಿ ಇದು ಅವರಿಗೆ ಮೊದಲ ಸಿನಿಮಾ. ಹೀಗಾಗಿ ಇದೂ ಕೂಡಾ ಚಿತ್ರವನ್ನು ನೋಡಲು ಪ್ರೇರೇಪಿಸುತ್ತಿದೆ.
ರಾಜರಥ ಚಿತ್ರದಲ್ಲಿ ಕನ್ನಡದಲ್ಲಷ್ಟೇ ಅಲ್ಲ, ತೆಲುಗಿನಲ್ಲಿ ರಾಜರಥಂ ಹೆಸರಿನಲ್ಲಿ ಬಿಡುಗಡೆಯಾಗುತ್ತಿದೆ. ಎರಡೂ ಭಾಷೆಗೆ ಪ್ರತ್ಯೇಕವಾಗಿ ಶೂಟ್ ಮಾಡಲಾಗಿದೆ.
ತೆಲುಗಿನಲ್ಲಿ ಬಸ್‍ಗೆ ಧ್ವನಿಯಾಗಿರೋದು ಬಾಹುಬಲಿಯ ಬಲ್ಲಾಳದೇವ ರಾಣಾ ದಗ್ಗುಬಾಟಿ.
ರಂಗಿತರಂಗ ಚಿತ್ರದ ಸಕ್ಸಸ್‍ನ್ನು ಮರೆತು, ಈ ಚಿತ್ರ ನಿರ್ಮಿಸಿದ್ದೇವೆ ಎನ್ನುತ್ತಿದೆ ಚಿತ್ರತಂಡ. ಹೊಸತನದ ಕಥೆ, ಹೊಸ ಲೊಕೇಷನ್‍ಗಳು, ಹೊಸ ಶೈಲಿಯ ಸಂಗೀತ... ಗಮನ ಸೆಳೆಯುತ್ತಿದೆ. ಒಂದು ಚಿತ್ರ ನೋಡಲು ಇನ್ನೇನು ಬೇಕು..?