ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರಕ್ಕೆ ರಚಿತಾ ರಾಮ್ ನಾಯಕಿಯಾದಾಗ, ಪುನೀತ್ ಅಭಿಮಾನಿಗಳು ನಿಜಕ್ಕೂ ಖುಷಿಗೊಂಡಿದ್ದರು. ಕನ್ನಡ ಚಿತ್ರರಂಗದ ಸ್ಟಾರ್‍ಗಳ ಹೀರೋಯಿನ್ ಎಂದೇ ಹೆಸರುವಾಸಿಯಾಗಿರುವ ರಚಿತಾಗೆ ಇದು ಅಪ್ಪು ಜೊತೆ ಎರಡನೇ ಸಿನಿಮಾ. ಚಕ್ರವ್ಯೂಹ ಚಿತ್ರದಲ್ಲಿ ಇದೇ ಜೋಡಿ ಮಾಡಿತ್ತು.
ಆದರೆ, ಪ್ರಿಯಾಂಕಾ ಜಾಗಕ್ಕೆ ರಚಿತಾ ರಾಮ್ ಬಂದಾಗ, ಆನ್‍ಲೈನ್‍ನಲ್ಲಿ ಒಂದು ಅಭಿಯಾನ ಶುರುವಾಯಿತು. ಪುನೀತ್ ಅಭಿಮಾನಿಗಳು ಎಂದು ಹೇಳಿಕೊಂಡ ಕೆಲವರು #ರಚಿತಾಬೇಡ ಎಂಬ ಅಭಿಯಾನವನ್ನೇ ನಡೆಸಿದರು. ಚಿತ್ರಲೋಕ ಈ ಬಗ್ಗೆ ವರದಿ ಮಾಡಿ, ಅದರ ನಂತರ ಸುದ್ದಿಯ ಬೆನ್ನು ಹತ್ತಿದಾಗ ಗೊತ್ತಾಗಿದ್ದೇ ಬೇರೆ.
ಪುನೀತ್ ರಾಜ್‍ಕುಮಾರ್, ತಮ್ಮ ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿರುತ್ತಾರೆ. ಆದರೆ, ಅವರ್ಯಾರೂ ಈ ಬಗ್ಗೆ ಪುನೀತ್ ಬಳಿ ಪ್ರಸ್ತಾಪ ಮಾಡಿಲ್ಲ. ನಿಜವಾದ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು ಅಪ್ಪು-ರಚಿತಾ ಜೋಡಿಗೆ ನಿಜಕ್ಕೂ ಖುಷಿಯಾಗಿದ್ದಾರೆ. ಆದರೆ, ಕೆಲವರು ಪುನೀತ್ ಅಭಿಮಾನಿಗಳ ಹೆಸರಲ್ಲಿ ಈ ಫೇಕ್ ಅಭಿಯಾನ ಶುರು ಮಾಡಿದ್ದು ಯಾಕೆ..? ಅದಕ್ಕೆ ಉತ್ತರವೇ ಸಿಗುತ್ತಿಲ್ಲ.
ಇನ್ನು ರಚಿತಾ ರಾಮ್, ಪುನೀತ್ ಬಗ್ಗೆ ಅತ್ಯಂತ ಗೌರವದಿಂದ ನಡೆದುಕೊಳ್ಳುವ ನಟಿ. ಇದು ಇಡೀ ಚಿತ್ರೋದ್ಯಮಕ್ಕೇ ಗೊತ್ತಿರುವ ವಿಷಯ. ಹಾಗಾದರೆ, ಇದು ಫೇಕ್ ಅಭಿಯಾನವಾ..? ಪುನೀತ್ ರಾಜ್‍ಕುಮಾರ್ ಅವರ ನಿಜವಾದ ಅಭಿಮಾನಿಗಳ್ಯಾರೂ ಈ ರೀತಿ ನಡೆದುಕೊಂಡಿಲ್ಲ. ಆದರೆ, ಈ ಅಭಿಯಾನ ಒಂದಿಷ್ಟು ತಳಮಳ ಸೃಷ್ಟಿಸಿದ್ದಂತೂ ಸತ್ಯ.
ಪುನೀತ್ ರಾಜ್‍ಕುಮಾರ್ ಆಗಲೀ, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಆಗಲೀ, ನಿರ್ದೇಶಕ ಪವನ್ ಒಡೆಯರ್ ಆಗಲೀ.. ಯಾರೂ ಈ ಅಭಿಯಾನವನ್ನು ಗಂಭೀರವಾಗಿ ಪರಿಗಣಿಸಿಲ್ಲ.
ಅಭಿಮಾನಿಗಳ ಹೆಸರಲ್ಲಿ ಇಂತಹ ಅತಿರೇಕಗಳು ಚಿತ್ರರಂಗಕ್ಕೆ ಹೊಸದೇನಲ್ಲ. ಆದರೆ, ಅತಿರೇಕದ ಅಭಿಮಾನ ಪ್ರದರ್ಶನದಿಂದ ಚಿತ್ರರಂಗಕ್ಕೆ ಒಳಿತಾಗುವುದಕ್ಕಿಂತ ಹೆಚ್ಚಾಗಿ ಕೆಡುಕೇ ಹೆಚ್ಚು. ನಿಜವಾದ ಅಭಿಮಾನಿಗಳು ಇದನ್ನು ಅರ್ಥ ಮಾಡಿಕೊಂಡಿದ್ದಾರೆ. ನಟಸಾರ್ವಭೌಮ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.
Related Articles :-