ನನಗೆ ಕನ್ನಡ ಬರುತ್ತದೆಯಾದರೂ, ಸ್ಪಷ್ಟವಾಗಿ, ಸರಾಗವಾಗಿ ಮಾತನಾಡುವುದು ಕಷ್ಟ. ನಟ ನಿರೂಪ್ ಭಂಡಾರಿ, ಚಿತ್ರದುದ್ದಕ್ಕೂ ನನ್ನನ್ನು ರೇಗಿಸುತ್ತಲೇ ಇದ್ದರು. ಆದರೆ, ಇದೇ ರಾಜರಥ ತೆಲುಗಿನಲ್ಲೂ ಪ್ರತ್ಯೇಕವಾಗಿ ಶೂಟ್ ಆಗಿದೆ. ಆಗ ನಿರೂಪ್ ಭಂಡಾರಿಗೆ ನಾನು ಅನುಭವಿಸಿದ ಕಷ್ಟ ಅರ್ಥವಾಯಿತು. ಏಕೆಂದರೆ, ತೆಲುಗು ಅವರಿಗೆ ಬರುತ್ತಿರಲಿಲ್ಲ. ಇಂಥಾದ್ದೊಂದು ಅನುಭವ ಹೇಳಿಕೊಳ್ಳುವ ಆವಂತಿಕಾ ಶೆಟ್ಟಿ, ಈಗಲೂ ರಾಜರಥದ ಮೇಘಾ ಪಾತ್ರದ ಗುಂಗಿನಿಂದ ಹೊರಬಂದಿಲ್ಲ.
ನಾನು ಪಾತ್ರದೊಳಗೆ ಯಾವ ಮಟ್ಟಕ್ಕೆ ಇನ್‍ವಾಲ್ವ್ ಆಗಿದ್ದೆ ಎಂದರೆ, ನನಗೆ ಈಗಲೂ ಮೇಘಾ ಪಾತ್ರದ ಗುಂಗಿನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ ಮೇಘನಾ.. ಅಲ್ಲಲ್ಲ.. ಆವಂತಿಕಾ ಶೆಟ್ಟಿ.
ರಂಗಿತರಂಗದಲ್ಲೂ ಹೀಗೆಯೇ ಆಗಿತ್ತು. ಸಂಧ್ಯಾ ಪಾತ್ರದ ಗುಂಗು ಹಲವಾರು ತಿಂಗಳು ಉಳಿದುಕೊಂಡಿತ್ತು. ಈಗ ರಾಜರಥದಲ್ಲೂ ಹಾಗೆಯೇ ಆಗುತ್ತಿದೆ. ಆದರೆ, ರಂಗಿತರಂಗಕ್ಕಿಂತ ರಾಜರಥ ಸವಾಲು. ಆ ಚಿತ್ರದಲ್ಲಿ ಎಲ್ಲರೂ ಹೊಸಬರೇ. ಆದರೆ, ಈಗ ಎಲ್ಲರ ಮೇಲೂ ನಿರೀಕ್ಷೆ ಇದೆ. ಆ ನಿರೀಕ್ಷೆಗಳನ್ನು ಮುಟ್ಟಿದ್ದೇವೆ ಎಂಬ ನಂಬಿಕೆಯೂ ಇದೆ ಅಂತಾರೆ ಆವಂತಿಕಾ ಶೆಟ್ಟಿ.
ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ, ಚಿತ್ರವನ್ನು ಜೀವಿಸಿದ್ದಾರೆ. ನಾಯಕ ನಟ ನಿರೂಪ್ ಭಂಡಾರಿ ಪಾತ್ರವೇ ತಾವಾಗಿ ಹೋಗಿದ್ದಾರೆ. ನನಗೂ ಇದೊಂದು ಕಂಫರ್ಟಬಲ್ ತಂಡ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ ಆವಂತಿಕಾ. ಆವಂತಿಕಾರ ಸಕಲ ನಿರೀಕ್ಷೆಗಳಿಗೂ ಉತ್ತರ ಸಿಗುವುದು ಬರುವ ಶುಕ್ರವಾರ.