ಅನುಪ್ರಭಾಕರ್ ವಿಷ್ಣುವರ್ಧನ್ ಜೊತೆ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಂಗಿ ಹಾಗೂ ಮಗಳ ಪಾತ್ರದಲ್ಲಿ ನಟಿಸಿರುವ ಅನುಪ್ರಭಾಕರ್, ಕಿಚ್ಚ ಸುದೀಪ್ ಜೊತೆಯಲ್ಲಿಯೂ ನಟಿಸಿರುವ ಕಲಾವಿದೆ. ಇಂತಹ ಅನುಪ್ರಭಾಕರ್‍ಗೆ ಇತ್ತೀಚೆಗೆ ಒಂದು ಕನಸು ಬಿದ್ದಿದೆ.
ಅನುಪ್ರಭಾಕರ್‍ಗೆ ಬಿದ್ದ ಕನಸಲ್ಲಿ ವಿಷ್ಣು ಮತ್ತು ಅನುಪ್ರಭಾಕರ್ ನಟಿಸುತ್ತಿದ್ದಾರೆ. ಆ ದೃಶ್ಯಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಕಿಚ್ಚ ಸುದೀಪ್. ಕನಸಿನಲ್ಲಿ ಇಂಥಾದ್ದೊಂದು ಅದ್ಭುತ ಸನ್ನಿವೇಶ ಕಂಡು ಥ್ರಿಲ್ ಆದ ಅನುಪ್ರಭಾಕರ್, ಆ ಕನಸನ್ನು ಸುದೀಪ್ ಜೊತೆ ಹಂಚಿಕೊಂಡಿದ್ದಾರೆ.
ಕಿಚ್ಚ ಸುದೀಪ್ ಕೂಡಾ ವಿಷ್ಣು ಅಭಿಮಾನಿ. ಮಾತಾಡ್ ಮಾತಾಡ್ ಮಲ್ಲಿಗೆ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಜೊತೆ ಪುಟ್ಟ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದವರು. ಅನುಪ್ರಭಾಕರ್ ಕಂಡ ಕನಸಿಗೆ ಅವರೊಂದು ಪ್ರತಿಕ್ರಿಯೆ ನೀಡಿದ್ದಾರೆ.
ಅನುಪ್ರಭಾಕರ್, ವಿಷ್ಣುವರ್ಧನ್ ಒಟ್ಟಿಗೇ ಇರುವ ದೃಶ್ಯವನ್ನು ಈಗಾಗಲೇ ಶೂಟ್ ಮಾಡಿದ್ದೇನೆ ಎಂದಿರುವ ಸುದೀಪ್, ಅಷ್ಟೇ ನವಿರಾಗಿ ಅದು ಗ್ರೀನ್‍ಮ್ಯಾಟ್ ಶೂಟ್ ಆಗಿತ್ತು ಎಂದಿದ್ದಾರೆ. ಅದು ಆಗಿದ್ದುದು #73ಶಾಂತಿನಿವಾಸ ಚಿತ್ರದಲ್ಲಿ. ಆ ಚಿತ್ರಕ್ಕೆ ಸ್ವತಃ ಸುದೀಪ್ ಅವರೇ ನಿರ್ದೇಶಕರಾಗಿದ್ದರು. ಅದು ಪುಟ್ಟ ದೃಶ್ಯವೇ ಇರಬಹುದು. ಎಲ್ಲೋ ಒಂದು ಕಡೆ ಅದು ನಿಜವಾಗಿದೆ ಎನ್ನುವುದೇ ನನಗೆ ಖುಷಿ. ನಿಮ್ಮನ್ನು ನಿರ್ದೇಶಿಸುವುದೂ ಕೂಡಾ ನನಗೆ ಸದಾ ಖುಷಿ ಕೊಡುವ ವಿಷಯ ಎಂದು ಹೇಳಿಕೊಂಡಿದ್ದಾರೆ ಸುದೀಪ್.
ಇದು ವಿಷ್ಣುವರ್ಧನ್ ಅವರ ಇಬ್ಬರು ಅಭಿಮಾನಿಗಳ ಕಥೆ. ಒಬ್ಬರು ಕನಸು ಕಂಡು ಖುಷಿಯಾದರೆ, ಇನ್ನೊಬ್ಬರು ನೆನಪು ಹಂಚಿಕೊಂಡು ಖುಷಿಯಾಗಿದ್ದಾರೆ.