ಅಕ್ಕ ಪಕ್ಕ ಸಿಕ್ಕಿ ನಕ್ಕ.. ಹಕ್ಕಿ ಪುಕ್ಕ ಹೆಕ್ಕಿ ಮುಕ್ಕ.. ರಾಗಿ ನಕ್ಕು ಕಿಕ್ಕಿರಿದ ಟಕರಕ ಟಕಟ.. ಒಂದ್ಸಲ ಈ ಹಾಡನ್ನು ಯಾವುದೇ ಗ್ಯಾಪ್ ಇಲ್ಲದೆ, ತಡವರಿಸದ ಹೇಳಿ ಬಿಡಿ.. ಕಷ್ಟವಾಗುತ್ತೆ ಅಲ್ವಾ..? ರಂಗಿತರಂಗದಲ್ಲಿ ಇಂಥಾದ್ದೊಂದು ಟಂಗ್ ಟ್ವಿಸ್ಟರ್ ಹಾಡನ್ನಿಟ್ಟು ಪ್ರೇಕ್ಷಕರನ್ನು ಆಕರ್ಷಿಸಿದ್ದ ಅನೂಪ್ ಭಂಡಾರಿ, ರಾಜರಥದಲ್ಲೂ ಅಂಥದ್ದೆ ಮ್ಯಾಜಿಕ್ ಮಾಡೋಕೆ ಹೊರಟಿದ್ದಾರೆ. ಗಂಡಕ ಹಾಡಿನ ಮೂಲಕ ಅಂಥದ್ದೇ ಮ್ಯಾಜಿಕ್ ಸೃಷ್ಟಿಸಿದ್ದಾರೆ.
ಅಂದಹಾಗೆ ನಿಮಗೆ ಗೊತ್ತಿರಲಿ.. ಗಂಡಕ ಎಂದರೆ ಬೇರೇನೋ ಅಲ್ಲ. ಅದು ಘೇಂಡಾಮೃಗಕ್ಕೆ ಕನ್ನಡದಲ್ಲಿಯೇ ಇರುವ ಪದ. ಹೀಗೆ ಮರೆಯಾಗುತ್ತಿರುವ ಕನ್ನಡದ ಪದವನ್ನು ಹಾಡಿನಲ್ಲಿ ತಂದು ಹೇಳುವ ಸಾಹಸ ಮಾಡಿದೆ ರಾಜರಥ ಚಿತ್ರತಂಡ. ಪ್ರಾಸಕ್ಕೇ ಹೆಚ್ಚು ಒತ್ತು ನೀಡಿರುವ ಹಾಡಿನಲ್ಲಿ ಇಂತಹ ಅಪರೂಪದ ಪದಗಳು ಬರುತ್ತವೆ. ಕನ್ನಡ ಎಷ್ಟು ಸೊಗಸಾಗಿದೆ ಎಂದು ಥ್ರಿಲ್ಲಾಗುವಂತಿದೆ ಎನ್ನುತ್ತಿದ್ದಾರೆ ಅನೂಪ್.
ಈ ಹಾಡು ಹಾಡಿರುವುದು ರವಿಶಂಕರ್. ಬಹುತೇಕರಿಗೆ ಗೊತ್ತಿರೋ ಹಾಗೆ ರವಿಶಂಕರ್‍ಗೆ ಶಾಸ್ತ್ರೀಯ ಸಂಗೀತದ ಸ್ಪರ್ಶವಿದೆ. ಹೀಗಾಗಿಯೇ ಈ ಹಾಡನ್ನು ಸರಾಗವಾಗಿ ಹಾಡಲು ಸಾಧ್ಯವಾಗಿದೆ. ಸ್ವತಃ ರವಿಶಂಕರ್ ಥ್ರಿಲ್ಲಾಗಿದ್ದಾರೆ. ಆ ಥ್ರಿಲ್ ಪ್ರೇಕ್ಷಕರಿಗೆ ಮಾರ್ಚ್ 23ನೇ ತಾರೀಕು ಸಿಗಲಿದೆ. ಅದು ರಾಜರಥ ಚಿತ್ರಮಂದಿರಕ್ಕೆ ಬರುವ ದಿನ.