ಮನೋರಂಜನ್ ರವಿಚಂದ್ರನ್ ಅವರ ಹೊಸ ಸಿನಿಮಾ ಸೆಟ್ಟೇರುತ್ತಿದೆ. ಚಿತ್ರದ ಹೆಸರು ಚಿಲಂ. ಏನಿದು ಚಿಲಂ ಅನ್ನಬೇಡಿ. ಇದೊಂದು ಗಾಂಜಾ ಸ್ಮಗ್ಲರ್ ಸ್ಟೋರಿ. ಗಾಂಜಾ ಸ್ಮಗ್ಲರ್ ಪಾತ್ರದಲ್ಲಿ ನಟಿಸುತ್ತಿರುವುದು ಮನೋರಂಜನ್. ಅದಕ್ಕಾಗಿ ಗಡ್ಡ ಬಿಟ್ಟು, ಧ್ವನಿಯನ್ನು ಗಡುಸಾಗಿಸಿಕೊಳ್ಳುತ್ತಿದ್ದಾರೆ ಮನೋರಂಜನ್.
ವಿಶೇಷವಿರುವುದು ಇದರಲ್ಲಿ ಅಲ್ಲ. ಚಿತ್ರದ ಪ್ರಮುಖ ಪಾತ್ರದಲ್ಲಿ ನಾನಾ ಪಾಟೇಕರ್ ಹಾಗೂ ರಾಘವೇಂದ್ರ ರಾಜ್‍ಕುಮಾರ್ ನಟಿಸಲಿದ್ದಾರೆ ಎನ್ನುವ ಸುದ್ದಿ ಇದೆ. ಇಬ್ಬರನ್ನೂ ಕರೆತರೋಕೆ ನಿರ್ಮಾಪಕರು ಶತಪ್ರಯತ್ನ ಮಾಡುತ್ತಿದ್ದಾರೆ.
ಅಂಡರ್‍ಕಾಪ್ ಪಾತ್ರದಲ್ಲಿ ನಾನಾ ಪಾಟೇಕರ್ ನಟಿಸೋಕೆ ಓಕೆ ಎಂದಿದ್ದಾರೆ. ಆದರೆ, ಗೋವಾ, ಮುಂಬೈ ಭಾಗದಲ್ಲಿ ಶೂಟಿಂಗ್ ಆಗಬೇಕು ಅನ್ನೋದು ಅವರ ಷರತ್ತು. ಇನ್ನೊಂದು ಅಂಡರ್‍ಕಾಪ್ ಪಾತ್ರಕ್ಕೆ ಕಿಶೋರ್ ಓಕೆ ಎಂದಿದ್ದಾರೆ. ರಾಘವೇಂದ್ರ ರಾಜ್‍ಕುಮಾರ್ ಅವರನ್ನು ವಿಶೇಷ ಪಾತ್ರಕ್ಕೆ ಕರೆತರಲು ಪ್ರಯತ್ನ ನಡೆಯುತ್ತಿದೆ.
ಚಿತ್ರದ ನಿರ್ಮಾಪಕ ಎಂ.ಗೋಪಾಲ್, ಹಲವರು ವರ್ಷ ವಜ್ರೇಶ್ವರಿ ಸಂಸ್ಥೆಯಲ್ಲಿ ಕೆಲಸ ಮಾಡಿದವರು. ಆ ಸ್ನೇಹದಿಂದಲೇ ರಾಘವೇಂದ್ರ ರಾಜ್‍ಕುಮಾರ್ ಅವರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ. ಗೋಪಾಲ್ ಹಾಗೂ ಅರವಿಂದ್ ಚಿತ್ರಕ್ಕೆ ಇನ್ನಿಬ್ಬರು ನಿರ್ಮಾಪಕರು.
ಚಿತ್ರಕ್ಕೆ ನಿರ್ದೇಶಕಿ ಚಂದ್ರಕಲಾ. ಕಥೆ, ಚಿತ್ರಕತೆ, ಸಂಭಾಷಣೆಯೂ ಅವರದ್ದೇ.