ಒಂದಾನೊಂದು ಕಾಲದಲ್ಲಿ ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಶಕೀಲಾ. ಶಕೀಲಾ ಅಭಿನಯದ ಅರೆನೀಲಿ ಚಿತ್ರಗಳ ಎದುರು ಮೋಹನ್ಲಾಲ್, ಮುಮ್ಮಟ್ಟಿಯಂಥವರ ಚಿತ್ರಗಳೂ ಪರದಾಡುತ್ತಿದ್ದ ಕಾಲವೂ ಇತ್ತು. ಹೆಚ್ಚೂ ಕಡಿಮೆ ಒಂದು ದಶಕದ ಕಾಲ ಮಲ್ಲು ಚಿತ್ರರಂಗವನ್ನು `ಕಡ್ಡಾಯವಾಗಿ ವಯಸ್ಕರಿಗೆ ಮಾತ್ರ' ಚಿತ್ರಗಳ ಮೂಲಕ ಆಳಿದವರು ಶಕೀಲಾ.
ಆಕೆಯ ಮೈಮಾಟ ನೋಡಿ ಖುಷಿ ಪಡುತ್ತಿದ್ದ ಅಭಿಮಾನಿಗಳಿಗೆ ಆಕೆಯ ಜೀವನದ ಕಥೆ ಹೊರಬಿದ್ದಾಗ ಶಾಕ್ ಆಗಿತ್ತು. ಏಕೆಂದರೆ, ಶಕೀಲಾ ಅವರ ಜೀವನದಲ್ಲಿ ಎದುರಿಸಿದ್ದ ಸಂಕಟಗಳು ಆಘಾತ ತರುವಂತಿದ್ದವು. ಜೀವನದ ಪ್ರತಿ ಹಂತದಲ್ಲೂ ಆಕೆ ಎದುರಿಸಿದ ಅವಮಾನ, ಅನುಮಾನದ ಕಥೆಗಳನ್ನು ಆತ್ಮಕಥೆಯಲ್ಲಿ ಮುಕ್ತವಾಗಿ ಹೇಳಿಕೊಂಡಿದ್ದರು ಶಕೀಲಾ.
ಈಗ ಅವರ ಆ ಜೀವನವನ್ನು ಸಿನಿಮಾ ಮಾಡಲು ನಿರ್ಧರಿಸಿದ್ದಾರೆ ನಿರ್ದೇಶಕ ಇಂದ್ರಜಿತ್ ಲಂಕೇಶ್. ಇದು ಹಳೆಯ ಪ್ರಾಜೆಕ್ಟೇ. 2015ರಲ್ಲಿಯೇ ಇಂದ್ರಜಿತ್ ಈ ಚಿತ್ರದ ಬಗ್ಗೆ ಮಾತನಾಡಿದ್ದರು. ಈಗ ಆ ಚಿತ್ರಕ್ಕೆ ಜೀವ ಬಂದಿದೆ. ಶಕೀಲಾ ಪಾತ್ರದಲ್ಲಿ ನಟಿಸೊಕೆ ಬಾಲಿವುಡ್ ನಟಿ ರಿಚಾ ಚಡ್ಡಾ ಒಪ್ಪಿಕೊಂಡಿದ್ದಾರಂತೆ. ಕೆಲವೇ ದಿನಗಳಲ್ಲಿ ಚಿತ್ರದ ಶೂಟಿಂಗ್ ಶುರುವಾಗಲಿದೆ.