ಚಾಮಯ್ಯ ಮೇಷ್ಟ್ರು ಎಂದೇ ಖ್ಯಾತರಾಗಿದ್ದ ಹಿರಿಯ ನಟ ಕೆ.ಎಸ್. ಅಶ್ವತ್ಥ್ ಅವರ ಪುತ್ರ ಶಂಕರ್ ಅಶ್ವತ್ಥ್, ಮೈಸೂರಿನಲ್ಲಿ ಉಬರ್ ಕಾರು ಚಾಲಕರಾಗಿ ಜೀವನ ಸಾಗಿಸುತ್ತಿದ್ದಾರೆ ಎನ್ನುವುದು ಕೆಲವು ತಿಂಗಳ ಹಿಂದೆ ಬೆಳಕಿಗೆ ಬಂದಿತ್ತು. ಸುದ್ದಿ ಮಾಧ್ಯಮಗಳಲ್ಲಿ ಈ ವಿಷಯ ಪ್ರಸಾರವಾದಾಗ ಚಿತ್ರರಂಗದ ಹಲವರು ನೆರವು ನೀಡುವ ಮಾತನ್ನಾಡಿದ್ದರು. ತಮ್ಮ ಚಿತ್ರಗಳಲ್ಲಿ ಅವಕಾಶ ಕೊಡುವ ಭರವಸೆ ಕೊಟ್ಟಿದ್ದರು. ಏಕೆಂದರೆ ಶಂಕರ್ ಅಶ್ವತ್ಥ್, ನೆರವು ಕೇಳಿರಲಿಲ್ಲ. ಬದಲಿಗೆ ಅವಕಾಶಗಳನ್ನಷ್ಟೇ ಕೇಳಿದ್ದರು.
ಆಗ ಮೌನವಾಗಿದ್ದವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಏನೊಂದೂ ಮಾತನಾಡಿರಲಿಲ್ಲ. ಆದರೆ, ಆಡದೇ ಮಾಡುವನು ರೂಢಿಯೊಳಗುತ್ತಮನು ಎಂಬಂತೆ, ದರ್ಶನ್ ತಮ್ಮ ಯಜಮಾನ ಚಿತ್ರದಲ್ಲಿ ಶಂಕರ್ ಅಶ್ವತ್ಥ್ ಅವರಿಗೆ ಪ್ರಮುಖ ಪಾತ್ರವೊಂದನ್ನು ಕೊಡಿಸಿದ್ದಾರೆ.
ದರ್ಶನ್ ಚಿತ್ರದಲ್ಲಿ ನಟಿಸುತ್ತಿರುವುದು ಇದೇ ಮೊದಲು. ಅವರೂ ಮೈಸೂರಿನವರೇ ಎಂದು ಹೇಳಿಕೊಂಡಿದ್ದಾರೆ ಶಂಕರ್ ಅಶ್ವತ್ಥ್. ಅವಕಾಶವಂಚಿತರಾದ ಶಂಕರ್ ಅಶ್ವತ್ಥ್ ಅವರನ್ನು ಮತ್ತೆ ಕರೆಸಿಕೊಂಡು ಅವಕಾಶ ಕೊಡಿಸಿದ್ದು ಯಜಮಾನ ಚಿತ್ರತಂಡದ ಹೆಗ್ಗಳಿಕೆ.