` ಸಿನಿಮಾ ಬಂದ್ - ನಿರ್ಮಾಪಕರ ಸಂಕಟವಾದರೂ ಏನು..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sifcc, kfc
UFO, Qube Vs Film Industry

ಎಲ್ಲವೂ ಅಂದುಕೊಂಡ ತೀರ್ಮಾನದಂತೆಯೇ ಆಗಿದ್ದರೆ, ಇಂದಿನಿಂದಲೇ ಯಾವುದೇ ಹೊಸ ಸಿನಿಮಾ ಪ್ರದರ್ಶನ ಇರುತ್ತಿರಲಿಲ್ಲ. ಬಹುತೇಕ ದಕ್ಷಿಣ ಭಾರತದ ಎಲ್ಲ ಭಾಷೆಯ ಸಿನಿಮಾ ವಾಣಿಜ್ಯ ಮಂಡಳಿಗಳೂ ಯುಎಫ್‍ಓ ಮತ್ತು ಕ್ಯೂಬ್ ಸಂಸ್ಥೆಗಳ ವಿರುದ್ಧ ಸಮರ ಸಾರಿವೆ. ಈ ಸಂಸ್ಥೆಗಳ ಹಠಮಾರಿತನ ಧೋರಣೆಗೆ ಬೇಸತ್ತು ಹೊಸ ವ್ಯವಸ್ಥೆಯನ್ನೇ ಹುಟ್ಟಿ ಹಾಕುವ ಚಿಂತನೆ ಯಾವಾಗ ಹೊರಬಿತ್ತೋ, ಅಪಾಯವನ್ನು ಅರಿತ ಎರಡೂ ಸಂಸ್ಥೆಗಳು ಮತ್ತೆ ಮಾತುಕತೆಗೆ ಆಸಕ್ತಿ ತೋರಿಸಿವೆ. ಹೀಗಾಗಿ ಈ ವಾರ ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಆದರೆ, ಈ ಎರಡೂ ಸಂಸ್ಥೆಗಳು ತಮ್ಮ ಪಟ್ಟು ಸಡಿಲಿಸದೇ ಹೋದರೆ, ಮಾರ್ಚ್ 9ರಿಂದ ಕನ್ನಡ ಸಿನಿಮಾಗಳೂ ಇರುವುದಿಲ್ಲ. ಈಗಾಗಲೇ ತಮಿಳು, ತೆಲುಗು ಹಾಗೂ ಮಲಯಾಳಂ ಹೊಸ ಚಿತ್ರಗಳು ಇಂದಿನಿಂದ ಇಲ್ಲ.

ಇಷ್ಟಕ್ಕೂ ಇಷ್ಟು ದೊಡ್ಡ ಮಟ್ಟದಲ್ಲಿ 5 ರಾಜ್ಯಗಳ 4 ಭಾಷೆಗಳ ಚಿತ್ರ ನಿರ್ಮಾಪಕರು ಸಿಡಿದೇಳಲು ಕಾರಣವೇನು ಎಂದು ಹುಡುಕುತ್ತಾ ಹೊರಟರೆ ಸಿಗುವುದು ಯುಎಫ್‍ಓ ಮತ್ತು ಕ್ಯೂಬ್ ಸಂಸ್ಥೆಗಳ ಏಕಸ್ವಾಮ್ಯ ಮಾರುಕಟ್ಟೆ ಮತ್ತು ದುಬಾರಿ ದರದ ಕಥೆ.

ಸದ್ಯ ಇರುವ ವ್ಯವಸ್ಥೆಗಳಲ್ಲಿ ಡಿಜಿಟಲ್ ಪ್ರಸಾರವೇ ಎಲ್ಲ ಕಡೆ ಇರುವುದು. ಇದರ ಜವಾಬ್ದಾರಿ ಹೊತ್ತಿರುವ ಯುಎಫ್‍ಓ ಮತ್ತು ಕ್ಯೂಬ್ ಸಂಸ್ಥೆಗಳು ಹೆಚ್ಚೂ ಕಡಿಮೆ ಐದೂ ರಾಜ್ಯಗಳಲ್ಲಿ ಏಕಸ್ವಾಮ್ಯ ಸಾಧಿಸಿಬಿಟ್ಟಿವೆ. ಹೀಗಾಗಿ ಇವರು ವಿಧಿಸಿದ್ದೇ ದರ.

ಆರಂಭದಲ್ಲಿ ಕೆಲವೇ ಸಾವಿರ ರೂಪಾಯಿಗಳಿಗೆ ಸಿಗುತ್ತಿದ್ದ ಸೇವೆಗೆ, ಈಗ ನಿರ್ಮಾಪಕರು ಒಂದು ವಾರಕ್ಕೆ 27 ಸಾವಿರ ರೂ. ಪಾವತಿಸಬೇಕು. ಒಂದು ಥಿಯೇಟರ್‍ನಲ್ಲಿ ಅದು ಒಂದೇ ಒಂದು ಶೋ ಪ್ರದರ್ಶನವಾಗಲಿ, 27 ಸಾವಿರ ರೂ. ಕೊಡಲೇಬೇಕು. ಅದೇ ಥಿಯೇಟರ್‍ನಲ್ಲಿ ಬೇರೆ ಬೇರೆ ಶೋಗಳಲ್ಲಿ ಬೇರೆ ಬೇರೆ ಚಿತ್ರಗಳು ಪ್ರದರ್ಶನವಾದರೂ ಅಷ್ಟೆ, ಪ್ರತಿ ಚಿತ್ರಕ್ಕೂ 27 ಸಾವಿರ ರೂ. ಸೇವಾಶುಲ್ಕ ಕಟ್ಟಬೇಕು ನಿರ್ಮಾಪಕ.

ಇನ್ನು ಚಿತ್ರವನ್ನು ಈ ಕಂಪೆನಿಗಳಿಗೆ ಅಪ್‍ಲೋಡ್ ಮಾಡುವುದಕ್ಕೆ ಕಟ್ಟಬೇಕಾದ ಶುಲ್ಕವೂ ಪ್ರತ್ಯೇಕ. ಅದನ್ನು ಕಟ್ಟಬೇಕಾದವರೂ ಸ್ವತಃ ನಿರ್ಮಾಪಕರೇ. ಹೀಗೆ ಯಾವುದೇ ಹಂತದಲ್ಲಿ ರಿಯಾಯಿತಿ ಸಿಗುವುದಿಲ್ಲ. ಇನ್ನು ಇದರ ಹೊರತಾಗಿ ನಿರ್ಮಾಪಕರು ಥಿಯೇಟರ್‍ನವರಿಗೂ ಬಾಡಿಗೆ ಕೊಡುತ್ತಾರೆ. 

ಆದರೆ, ನಿರ್ಮಾಪಕನಿಂದಲೇ ದುಬಾರಿ ಶುಲ್ಕ ಪಡೆದು ಪ್ರದರ್ಶಿಸುವ ಸಿನಿಮಾದಲ್ಲಿ ಯುಎಫ್‍ಓದವರು ಜಾಹೀರಾತು ತುಂಬುತ್ತಾರೆ. ಈ ಜಾಹೀರಾತುಗಳಿಗೆ ಲಕ್ಷ ಲಕ್ಷ ಹಣ ವಸೂಲಿ ಮಾಡುತ್ತಾರೆ. ಅವುಗಳನ್ನು ಅವರು ಪ್ರಸಾರ ಮಾಡುವುದು ನಿರ್ಮಾಪಕರಿಂದ ಶುಲ್ಕ ಪಡೆದು ಪ್ರಸಾರ ಮಾಡುವ ಅವರದ್ದೇ ಸಿನಿಮಾಗಳ ಮಧ್ಯೆ. ನಿರ್ಮಾಪಕರೇ ಬಾಡಿಗೆ ಕಟ್ಟಿರುವ ಥಿಯೇಟರುಗಳಲ್ಲಿ. ಆದರೆ, ಈ ಜಾಹೀರಾತುಗಳಲ್ಲಿ ನಿರ್ಮಾಪಕರಿಗೆ ನಯಾಪೈಸೆ ಕೊಡುವುದಿಲ್ಲ.

ನಿರ್ಮಾಪಕರ ಬೇಡಿಕೆ ಇಷ್ಟೆ. ಕಂಪೆನಿಗಳು ಪಡೆಯುತ್ತಿರುವ ಜಾಹೀರಾತುಗಳಲ್ಲಿ ನಿರ್ಮಾಪಕರಿಗೂ ಲಾಭಾಂಶ ಕೊಡಬೇಕು ಹಾಗೂ ದುಬಾರಿ ಸೇವಾಶುಲ್ಕವನ್ನು ಕಡಿಮೆ ಮಾಡಬೇಕು. ಈ ಬೇಡಿಕೆಗೆ ಯುಎಫ್‍ಓ ಮತ್ತು ಕ್ಯೂಬ್ ಸಂಸ್ಥೆಗಳು ಒಪ್ಪದೇ ಇರುವದೇ ಈ ಪ್ರತಿಭಟನೆಗೆ ಕಾರಣ.

ಅಂದಹಾಗೆ, ಯುಎಫ್‍ಓ ಹಾಗೂ ಕ್ಯೂಬ್ ಸಂಸ್ಥೆಗಳು ಪಟ್ಟು ಸಡಿಲಿಸದೇ ಹೋದಲ್ಲಿ ಪ್ರತ್ಯೇಕ ಡಿಜಿಟಲ್ ವ್ಯವಸ್ಥೆಯೇ ಸಿದ್ಧವಾಗಬಹುದು. ಚಿತ್ರ ನಿರ್ಮಾಪಕರಲ್ಲಿ ಈ ಕುರಿತು ಕೂಡಾ ಚರ್ಚೆ ನಡೆಯುತ್ತಿವೆ. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery