ಭಾರತೀಯ ಚಿತ್ರರಂಗದ ಧ್ರುವತಾರೆ ಶ್ರೀದೇವಿ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ಕನ್ನಡದಲ್ಲಿ ರೆಬಲ್‍ಸ್ಟಾರ್ ಅಂಬರೀಷ್, ಸುಮಲತಾ, ಕಿಚ್ಚ ಸುದೀಪ್, ದ್ವಾರಕೀಶ್, ಶ್ರೀನಾಥ್, ಬಿ.ಸರೋಜಾದೇವಿ.. ಮೊದಲಾದವರು ಶ್ರೀದೇವಿ ಜೊತೆ ಕೆಲಸ ಮಾಡಿರುವ ಕಲಾವಿದರು.
ಶ್ರೀದೇವಿ ಎಂದರೆ, ಸೆಟ್‍ನಲ್ಲಿ ಲವಲವಿಕೆಯಿಂದ ಓಡಾಡುತ್ತಿದ ಹುಡುಗಿಯೇ ನೆನಪಿಗೆ ಬರುತ್ತಾಳೆ. ಆಕೆಯ ಕುಟುಂಬಕ್ಕೆ ದೇವರು ಈ ದುಃಖ ಭರಿಸುವ ಶಕ್ತಿ ನೀಡಲಿ - ಅಂಬರೀಷ್, ನಟ
ನಾನು ನಟಿಸಿದ ಮೊದಲ ಸಿನಿಮಾದಲ್ಲಿ ಶ್ರೀದೇವಿ ನಾಯಕಿ. ಅದ್ಭುತ ಸುಂದರಿ, ಅದ್ಭುತ ನಟಿ. ಅನೇಕರಿಗೆ ಮಾದರಿಯಾಗಬಲ್ಲ ವ್ಯಕ್ತಿತ್ವ ಅವರದ್ದು. - ಸುಮಲತಾ, ನಟಿ
ನಾನು ಶ್ರೀದೇವಿ ಜೊತೆ ನಟಿಸಲು ಅವಕಾಶ ಪಡೆದಿದ್ದ ಅದೃಷ್ಟವಂತ. ಅವರ ಜೊತೆ ಕಳೆದ ಸಮಯವನ್ನು ಯಾವಿತ್ತಿಗೂ ಮರೆಯುವುದಿಲ್ಲ. ಕೆಲವು ಸಂಗತಿಗಳನ್ನು ನಂಬುವುದು ಕಷ್ಟ. ಅವರ ಸಾವು ನನ್ನನ್ನು ಘಾಸಿಗೊಳಿಸಿದೆ - ಸುದೀಪ್, ನಟ
ಅವರೊಬ್ಬ ಅದ್ಭುತ ನಟಿ. ಅವರ ನೃತ್ಯಕ್ಕೆ ನಾನು ಮನಸೋತಿದ್ದೆ - ಶಿವರಾಜ್ ಕುಮಾರ್, ನಟ
ಭಾರತೀಯ ಸಿನಿಮಾ ರಂಗವೇ ಇಂದು ದುಃಖದಲ್ಲಿದೆ. ಪ್ರಬುದ್ಧ ನಟಿಯೊಬ್ಬರನ್ನು ಕಳೆದುಕೊಂಡು ಅನಾಥವಾಗಿದೆ - ಪುನೀತ್ ರಾಜ್‍ಕುಮಾರ್, ನಟ
ಬೆಳಗ್ಗೆ ಸುದ್ದಿ ತಿಳಿಯುತ್ತಿದ್ದಂತೆ ನಂಬಲು ಸಾಧ್ಯವಾಗಲಿಲ್ಲ. ಫೇಕ್ ನ್ಯೂಸ್ ಆಗಿರಲಿ ಎಂದು ಮನಸ್ಸು ಕೇಳುತ್ತಿತ್ತು. ಅಭಿಮಾನಿಗಳ ಹೃದಯಲ್ಲಿ ಅವರು ಯಾವಾಗಲೂ ಶಾಶ್ವತವಾಗಿರುತ್ತಾರೆ - ಯಶ್, ನಟ
ರಂಭೆ, ಊರ್ವಶಿ, ಮೇನಕೆಯರನ್ನು ಯಾರು ನೋಡಿದ್ದರೋ ಗೊತ್ತಿಲ್ಲ. ನಮ್ಮ ಕಣ್ಣೆದುರು ನೋಡಿದ್ದ ರಂಭೆ, ಊರ್ವಶಿ, ಮೇನಕೆಯರ ಒಟ್ಟು ರೂಪವೇ ಶ್ರೀದೇವಿ - ಸಾ.ರಾ.ಗೋವಿಂದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು
ನಟಿ ಎನಿಸಿಕೊಳ್ಳುವವರು ಹೀಗೆಯೇ ಇರಬೇಕು ಎನ್ನುವ ಮಾದರಿಯ ನಟಿ ಶ್ರೀದೇವಿ. ಅವರ ಕಣ್ಣು ಅವರಿಗೆ ದೇವರು ಕೊಟ್ಟ ವರ. - ಎಸ್.ವಿ.ರಾಜೇಂದ್ರಸಿಂಗ್ ಬಾಬು, ಚಲನಚಿತ್ರ ಅಕಾಡೆಮಿ ಅಧ್ಯಕ್ಷರು
ನನ್ನ ಒಬ್ಬ ಒಳ್ಳೆಯ ಸ್ನೇಹಿತೆ ನನ್ನನ್ನು ಅಗಲಿದ್ದಾರೆ - ರಜಿನಿಕಾಂತ್, ನಟ
ನನ್ನ ಮನಸ್ಸು ಅವರ ಸಾವನ್ನು ಇನ್ನೂ ನಂಬುತ್ತಿಲ್ಲ. - ಸುಧಾರಾಣಿ, ನಟಿ