ಚಿತ್ರನಟಿ ತಾರಾ ಬಿಜೆಪಿಯಿಂದ ಶಾಸಕಿಯಾಗಿರುವವರು. ರಾಜಕೀಯವಾಗಿ ಏನೇ ಇದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಜೊತೆ ಒಳ್ಳೆಯ ಸ್ನೇಹವಿದೆ. ಸಿದ್ದರಾಮಯ್ಯ ಕೂಡಾ ಅಷ್ಟೆ, ಎದುರಾಳಿ ಪಕ್ಷದಲ್ಲದ್ದರೂ, ತಾರಾ ಅವರನ್ನು ಅತ್ಯಂತ ಗೌರವದಿಂದ ಕಾಣುತ್ತಾರೆ. ಅಂತಹ ತಾರಾ, ಸಿದ್ದರಾಮಯ್ಯ ಎದುರು ಗಪ್‍ಚುಪ್ ಆದ ಕಥೆ ಇದು.
ಆಗಿದ್ದು ಇಷ್ಟು, ಈಗ ಶುರುವಾಗಿರುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಸಿದ್ದರಾಮಯ್ಯನವರೇ ಉದ್ಘಾಟಿಸಬೇಕಿತ್ತು. ಎಲ್ಲವೂ ಪೂರ್ವನಿಗದಿಯಾಗಿತ್ತು. ಮತ್ತೊಮ್ಮೆ ಅವರನ್ನು ಆಹ್ವಾನಿಸಲು ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು ಮುಖ್ಯಮಂತ್ರಿಗಳ ಕಚೇರಿಗೆ ಹೋದರು. ಅಲ್ಲಿ ಸಿದ್ದರಾಮಯ್ಯ ಅವರ ಜೊತೆ ಶಾಸಕಿ ಹಾಗೂ ನಟಿ ತಾರಾ ಮಾತನಾಡುತ್ತಿದ್ದರು. ಸಿದ್ದರಾಮಯ್ಯನವರು, ಸದನದಲ್ಲಿ ನಡೆಯುತ್ತಿರುವ ಗಂಭೀರ ಕಲಾಪವನ್ನು ವಿವರಿಸಿ, ಚಲನಚಿತ್ರೋತ್ಸವ ಉದ್ಘಾಟನೆಗೆ ಬರಲು ಸಾಧ್ಯವಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಇದೇ ವೇಳೆ ತಾರಾ ಅವರಿಗೆ ಸಾ.ರಾ.ಗೋವಿಂದು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರ, ಕನ್ನಡ ಸಿನಿಮಾ ರಂಗಕ್ಕೆ ಯಾವುದೇ ಕೊಡುಗೆ ನೀಡಿಲ್ಲ ಎಂದೇಕೆ ಹೇಳಿಕೆ ನೀಡಿದ್ದೀರಿ. ಅವರು ಇನ್ನೂ ಎಷ್ಟು ಕೊಡಬೇಕು. ಕಳೆದ ವರ್ಷದ ಬಜೆಟ್‍ನಲ್ಲೂ ಅವರು ನಾವು ಕೇಳಿದ್ದನ್ನು ಕೊಟ್ಟಿದ್ದಾರೆ. ಈ ಬಾರಿಯ ಬಜೆಟ್‍ನಲ್ಲೂ ನಾವು ಕೇಳಿದ್ದಕ್ಕೆ ಇಲ್ಲ ಎಂದಿಲ್ಲ. ಹೀಗಿರುವಾಗ ಹಾಗೇಕೆ ಹೇಳಿಕೆ ಕೊಟ್ಟಿರಿ ಎಂದು ಪ್ರಶ್ನಿಸಿದ್ದಾರೆ.
ನಮ್ಮಿಬ್ಬರ ನಡುವೆ ತಂದು ಹಾಕಬೇಡಿ ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ ತಾರಾ. ನಾನು ನೀವು ಮಾಧ್ಯಮಗಳಿಗೆ ಮಾತನಾಡಿರುವುದು ನೋಡಿಯೇ ಕೇಳುತ್ತಿದ್ದೇನೆ ಎಂದಿದ್ದಾರೆ ಸಾ.ರಾ.ಗೋವಿಂದು.
ಅಚ್ಚರಿಗೊಂಡ ಸಿದ್ದರಾಮಯ್ಯ, ತಾರಾ, ಏನಮ್ಮಾ.. ಅಂಥಾ ಹೇಳಿಕೆ ಕೊಟ್ಟಿದ್ದೀಯಾ ಎಂದಿದ್ದಾರೆ. ತಾರಾ ಗಪ್‍ಚುಪ್.