ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್‍ರ ಪುತ್ರ ಮಹಮ್ಮದ್ ನಲಪ್ಪಾಡ್‍ನ ದಾದಾಗಿರಿ, ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ. ನಲಪ್ಪಾಡ್‍ನ ರೌಡಿಸಂ ಆರ್ಭಟಕ್ಕೆ, ವಿದ್ವತ್ ಎಂಬ ಹುಡುಗನ ಎದೆ ಮೂಳೆಗಳು ಮುರಿದಿವೆ. ದವಡೆಯ ಎಲುಬುಗಳು ನಲುಗಿವೆ. ಮೂರು ದಿನ ಕಳೆದರೂ ಐಸಿಯುನಿಂದ ಹೊರಬಂದಿಲ್ಲ ವಿದ್ವತ್. ಇನ್ನೂ ಒಂದು ವಾರ ವಿದ್ವತ್ ಐಸಿಯುನಲ್ಲೇ ಇರಬೇಕೆಂದು ಹೇಳಿದ್ದಾರೆ ವೈದ್ಯರು. ಹೀಗೆ ಹೊಡೆತ ತಿಂದು ಆಸ್ಪತ್ರೆಯಲ್ಲಿ ಮಲಗಿರುವ ವಿದ್ವತ್‍ಗೆ ಸಾಂತ್ವನ ಹೇಳಲು ಹೋದವರು ಪುನೀತ್ ರಾಜ್‍ಕುಮಾರ್.
ಅಂದಹಾಗೆ ನಲಪ್ಪಾಡ್‍ನ ಗೂಂಡಾಗಿರಿಗೆ ಏಟು ತಿಂದು ರಕ್ತದ ಮಡುವಿನಲ್ಲಿ ಬಿದ್ದವನನ್ನು ಆಸ್ಪತ್ರೆಗೆ ಸೇರಿಸಿದ್ದವರು ಗುರು ರಾಜ್‍ಕುಮಾರ್. ಪುನೀತ್ ಅವರ ಅಣ್ಣ ರಾಘವೇಂದ್ರ ರಾಜ್‍ಕುಮಾರ್ ಅವರ 2ನೇ ಮಗ. ಗುರು ಮತ್ತು ವಿದ್ವತ್ ಬಾಲ್ಯ ಸ್ನೇಹಿತರು. ಚಿಕ್ಕಂದಿನಿಂದ ಒಟ್ಟಿಗೇ ಬೆಳೆದಿದ್ದವರು ಸಹಜವಾಗಿಯೇ ವಿದ್ವತ್, ಪುನೀತ್ ಅವರಿಗೆ ಚಿರಪರಿಚಿತ.
ವಿದ್ವತ್‍ನನ್ನು ಆಸ್ಪತ್ರೆಯಲ್ಲಿ ನೋಡಿಬಂದ ಪುನೀತ್ ಭಾವುಕರಾಗಿದ್ದುದು ಸುಳ್ಳಲ್ಲ. ಇಂತಹ ಘಟನೆ ನಡೆಯಬಾರದಿತ್ತು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ವಿದ್ವತ್ ನನ್ನ ತಮ್ಮ ಅಥವಾ ಮಗನಿದ್ದ ಹಾಗೆ ಎಂದರು ಪುನೀತ್ ರಾಜ್‍ಕುಮಾರ್.
ಇನ್ನು ಜೀವದ ಗೆಳೆಯ ವಿದ್ವತ್ ಮೇಲೆ ನಡೆದ ಹಲ್ಲೆ, ಗುರು ರಾಜ್‍ಕುಮಾರ್ ಅವರನ್ನೂ ಕೆರಳಿಸಿದೆ. ಜಸ್ಟಿಸ್ ಫಾರ್ ವಿದ್ವತ್ ಎಂಬ ಅಭಿಯಾನ ಆರಂಭಿಸಿದ್ದಾರೆ ಗುರು ರಾಜ್‍ಕುಮಾರ್. ವಿದ್ವತ್ ಜೊತೆಗಿನ ಪುಟ್ಟ ಮಕ್ಕಳಾಗಿದ್ದಾಗಿನ ಫೋಟೋವೊಂದನ್ನು ಹಾಕಿಕೊಂಡಿದ್ದಾರೆ.
ಇನ್ನೊಂದು ವಿಷಯವೇನೆಂದರೆ, ವಿದ್ವತ್ ಅಂಗವಿಕಲರೇನಲ್ಲ. ಆದರೆ, ಅವರ ಒಂದು ಕಾಲು ಸೊಟ್ಟಗಿದ್ದು, ಸರಿಯಾಗಿ ಕೂರಲು ಸಾಧ್ಯವಾಗುವುದಿಲ್ಲ. ಹೀಗಾಗಿಯೇ ಹೋಟೆಲ್‍ನಲ್ಲಿ ಅವರ ಕಾಲು ತಾಗಿತು ಎಂದು ನಲಪ್ಪಾಡ್ ಅಬ್ಬರಿಸಿರುವುದು. ವಿದ್ವತ್ ಎರಡು ಬಾರಿ ಕ್ಷಮೆ ಕೇಳಿದರೂ ಬಿಡದೆ ಹೊಡೆದಿರುವುದು. ವಿದ್ವತ್‍ಗೆ ನ್ಯಾಯ ಸಿಗಬೇಕಿದೆ.