ಪಾರೂಲ್ ಯಾದವ್ ಅಂದ್ರೆ ತಕ್ಷಣ ನೆನಪಾಗೋದು ಪ್ಯಾರ್‍ಗೆ ಆಗ್‍ಬುಟ್ಟೈತೆ ಹಾಡು. ಈ ಪ್ಯಾರ್‍ಗೇ ಹುಡುಗಿ ಕನ್ನಡದವರೇನಲ್ಲ. ಅಪ್ಪಟ ಗುಜರಾತಿ. ಆದರೆ, ವಾಸ ಇರುವುದು ಮುಂಬೈನಲ್ಲಿ. ತಮಿಳು, ತೆಲುಗು, ಮಲಯಾಳಂನಲ್ಲಿ ನಟಿಸಿದ್ದರೂ, ಕನ್ನಡದಲ್ಲಿಯೇ ಜನಪ್ರಿಯ ನಾಯಕಿ. ಈಗ ಬೆಂಗಳೂರಿಗೇ ಶಿಫ್ಟ್ ಆಗಿರುವ ಪಾರೂಲ್, ಕನ್ನಡತಿಯೂ ಆಗಿ ಬಿಟ್ಟಿದ್ದಾರೆ.
ನಿಮಗೆಲ್ಲ ಗೊತ್ತಿರೋ ಹಾಗೆ, ಪಾರೂಲ್ ಈಗ ನಟಿಯಷ್ಟೇ ಅಲ್ಲ. ನಿರ್ಮಾಪಕಿಯೂ ಹೌದು. ಬಟರ್ ಫ್ಲೈ ಚಿತ್ರದ ನಿರ್ಮಾಪಕರಲ್ಲಿ ಪಾರೂಲ್ ಕೂಡಾ ಒಬ್ಬರು. ಅದು ಕ್ವೀನ್ ಚಿತ್ರದ ರೀಮೇಕ್. ನಿರ್ದೇಶಕ ರಮೇಶ್ ಅರವಿಂದ್. ಈಗ ಕನ್ನಡದ ವಿಷಯಕ್ಕೆ ಬರೋಣ.
ಚಿತ್ರದ ಸ್ಕ್ರಿಪ್ಟ್ ವರ್ಕ್ ಎಲ್ಲ ಮುಗಿಯುವ ಹಂತದಲ್ಲಿದ್ದಾಗ, ರಮೇಶ್ ಅರವಿಂದ್ ಚಿತ್ರತಂಡಕ್ಕೊಂದು ವರ್ಕ್‍ಶಾಪ್ ಇಟ್ಟುಕೊಂಡಿದ್ದಾರೆ. ಆಗ ಪಾರೂಲ್‍ಗೆ ರಮೇಶ್, ನಿಮಗೆ ಕನ್ನಡ ಓದೋಕೆ ಬರುತ್ತಾ ಎಂದು ಕೇಳಿದರಂತೆ. ಪಾರೂಲ್ ಇಲ್ಲ ಎಂದು ಹೇಳಿದ್ದೇ ತಡ, ರಮೇಶ್ ಮುಖಭಾವವೇ ಬದಲಾಗಿ ಹೋಯ್ತಂತೆ. ರಮೇಶ್ ಕಣ್ಣಿನಲ್ಲಿ ಮೂಡಿದ ಆ ಬೇಸರವನ್ನು ತಕ್ಷಣ ಆರ್ಥ ಮಾಡಿಕೊಂಡ ಪಾರೂಲ್, ನಂತರ ರಮೇಶ್‍ಗೂ ಹೇಳದೆ ಮಾಡಿದ ಮೊದಲ ಕೆಲಸ ಕನ್ನಡ ಟೀಚರ್‍ನ್ನು ನೇಮಕ ಮಾಡಿಕೊಂಡಿದ್ದು.
ಅದಾದ ನಂತರ ಶೂಟಿಂಗ್ ಶುರುವಾಗುವ ವೇಳೆಗೆ ನನಗೆ ಕನ್ನಡ ಪ್ರಾಂಪ್ಟ್ ಮಾಡೋಕೆ ಬರುತ್ತೆ ಎಂದಾಗ, ರಮೇಶ್ ಕಣ್ಣಿನಲ್ಲಿ ನಗು ಕಾಣಿಸಿತಂತೆ.
ಬಟರ್ ಫ್ಲೈ ಚಿತ್ರದ ಕನ್ನಡದ ನೆನಪು ಹೇಳಿಕೊಂಡಿರುವ ಪಾರೂಲ್, ಈಗ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ. ಚಿತ್ರ ಮೇ ತಿಂಗಳಲ್ಲಿ ತೆರೆ ಕಾಣುವ ಸಾಧ್ಯತೆ ಇದೆ.