` ಮೋದಿಗೆ ಅಮಲು ಎಂದ ರಮ್ಯಾಗೆ ಕ್ಲಾಸ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ramya's comments
Ramya's tweet creates stir

ನಟಿ ರಮ್ಯಾಗೂ, ವಿವಾದಗಳಿಗೂ ಎಲ್ಲಿಲ್ಲದ ನಂಟು. ಏನಾದರೊಂದು ಹೇಳಿಕೆ ಕೊಡುವುದು, ಅದು ವಿವಾದವಾದ ನಂತರ, ಸ್ಪಷ್ಟನೆ ಕೊಡೋದು, ಕ್ಷಮೆ ಕೇಳೋದು, ಸಮರ್ಥನೆ ಮಾಡಿಕೊಳ್ಳೋದು ರಮ್ಯಾ ಅವರಿಗೆ ಅಭ್ಯಾಸವೇ ಆಗಿಬಿಟ್ಟಿದೆ. ಈ ಬಾರಿ ಕೂಡಾ ಅವರು ವಿವಾದವೊಂದನ್ನು ಮೈಮೇಲೆಳೆದುಕೊಂಡಿದ್ದಾರೆ. ನರೇಂದ್ರ ಮೋದಿಗೆ ಅಮಲು ಎಂದು ಹೇಳಿ ಹಿಗ್ಗಾಮುಗ್ಗಾ ಟೀಕೆಗೆ ಗುರಿಯಾಗಿದ್ದಾರೆ.

ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯಾಗಿರುವ ರಮ್ಯಾ, ಬೆಂಗಳೂರಿನಲ್ಲಿನ ನರೇಂದ್ರ ಮೋದಿ ಭಾಷಣವನ್ನು ಟೀಕಿಸಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. ಮೋದಿ ನಮ್ಮ ಟಾಪ್ ಪ್ರಿಯಾರಿಟಿ ಟೊಮ್ಯಾಟೋ, ಆನಿಯನ್ ಹಾಗೂ  ಪೊಟ್ಯಾಟೋ. ರೈತರನ್ನು ನಾವು ಕಾಪಾಡುತ್ತೇವೆ ಎಂದು ಮಾತನಾಡಿದ್ದರು. ಅದನ್ನೇ ಉಲ್ಟಾ ಮಾಡಿ ಹೇಳಿರುವ ರಮ್ಯಾ, ಮೋದಿ ಅಮಲಿನಲ್ಲಿದ್ದಾಗ ಈ ರೀತಿ ಮಾತನಾಡ್ತಾರೆ ಎಂದು ಟ್ವೀಟ್ ಮಾಡಿಬಿಟ್ಟಿದ್ದಾರೆ. ಅಂದಹಾಗೆ ಇಂಗ್ಲಿಷ್‍ನಲ್ಲಿ ಪಾಟ್ ಅಂದರೆ, ಮಡಕೆ ಎಂದಷ್ಟೇ ಅಲ್ಲ, ಮರಿಜುವಾನ (ಮಾದಕ ದ್ರವ್ಯ) ಅನ್ನೋ ಡ್ರಗ್ಸ್ ಸೇವಿಸಿ ಅಮಲಿನಲ್ಲಿರುವವರನ್ನು ಪಾಟ್ ಎಂದು ಹೇಳ್ತಾರೆ. ಪ್ರಧಾನಿಯೊಬ್ಬರನ್ನು ಟೀಕಿಸುವ ಪದ ಅದಾಗಿರಲಿಲ್ಲ. ಆದರೆ, ಇಲ್ಲಿ ರಮ್ಯಾ, ಟೀಕಿಸುವ ಭರದಲ್ಲಿ ಸಂಯಮದ ಗಡಿ ದಾಟಿಬಿಟ್ಟಿದ್ದಾರೆ. ಸಹಜವಾಗಿಯೇ ಹಲವರು ರಮ್ಯಾ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಚಿತ್ರ ನಿರ್ಮಾಪಕಿ ಶಿಲ್ಪಾ ಗಣೇಶ್, ಸತತ ಸೋಲಿಗೆ ತಲೆಕೆಟ್ಟು ಆಗಾಗ ವಿದೇಶಕ್ಕೆ ಹೋಗುವವರಿಗೆ ನಶೆಯ ವಿಚಾರ ಚೆನ್ನಾಗಿಯೇ ತಿಳಿದಿರುತ್ತದೆ. ನಟಿ ರಮ್ಯಾ ಹೆಸರಿನಲ್ಲಿಯೇ ರಮ್ ಇದೆ. ಬಹುಶಃ ಆಕೆ ಟ್ವೀಟ್ ಮಾಡುವಾಗಲೆಲ್ಲ ಕುಡಿದೇ ಇರುತ್ತಾರೇನೋ ಎಂದು ಜಾಡಿಸಿದ್ದಾರೆ.

ನಟ ಜಗ್ಗೇಶ್ `ಮೋದಿಯನ್ನು ಟೀಕಿಸುವ ಯೋಗ್ಯತೆ ರಮ್ಯಾಗಿಲ್ಲ. ಕನ್ನಡ ಮಾತನಾಡಲು ಬಾರದ ಕಾಡುಪಾಪ ಈಕೆ. ಕ್ಯಾಚ್ ಹಾಕ್ಕೊಂಡು ಸಿನಿಮಾ, ದೊಡ್ಡವರ ಆಶೀರ್ವಾದದಲ್ಲಿ ರಾಜಕೀಯ ಮಾಡಿದವರಿಗೆ ಮೋದಿಯವರ ಬಗ್ಗೆ ಮಾತನಾಡೋಕೆ ಯೋಗ್ಯತೆ ಇಲ್ಲ ಎಂದು ಟೀಕಿಸಿದ್ದಾರೆ.

ಟೀಕೆಗಳ ನಂತರವೂ ರಮ್ಯಾ ಕ್ಷಮೆಯನ್ನೇನೂ ಕೇಳಿಲ್ಲ. ಪಾಟ್ ಎಂದರೆ ಪೊಟ್ಯಾಟೋ, ಆನಿಯನ್, ಟೊಮ್ಯಾಟೋ ಎಂದೇ ಹೇಳಿದ್ದೇನೆ. ಕ್ರೀಡಾ ಮನೋಭಾವದಿಂದ ಸ್ವೀಕರಿಸಿ ಎನ್ನುವ ಮೂಲಕ ತಿರುಗೇಟು ಕೊಟ್ಟಿದ್ದಾರೆ.