ರಾಜಾಸಿಂಹ ಚಿತ್ರದ ಹೆಸರು, ಚಿತ್ರದಲ್ಲಿ ಗ್ರಾಫಿಕ್ಸ್‍ನಲ್ಲಿ ಮೂಡಿಸಿರುವ ವಿಷ್ಣುವರ್ಧನ್ ಗೆಟಪ್ ಎಲ್ಲವನ್ನೂ ನೋಡಿದರೆ, ಅಭಿಮಾನಿಗಳಿಗೆ ಮೂಡುತ್ತಿದ್ದ ಪ್ರಶ್ನೆಯೇ ಅದು. ಇದಕ್ಕೂ ಸಿಂಹಾದ್ರಿಯ ಸಿಂಹ ಚಿತ್ರಕ್ಕೂ ಸಂಬಂಧ ಇದೆಯಾ ಅನ್ನೋದು. ಹೌದು ಎಂಬ ಉತ್ತರ ಬಂದಿದೆ ಚಿತ್ರತಂಡದ ಕಡೆಯಿಂದ.
ಇದು ಸಿಂಹಾದ್ರಿಯ ಸಿಂಹ ಚಿತ್ರದ ಮುಂದುವರಿದ ಭಾಗ ಎನ್ನುತ್ತಾರೆ ಅನಿರುದ್ಧ. ಅಪ್ಪಾಜಿ ನಿಧನರಾದ 8 ವರ್ಷಗಳ ನಂತರವೂ ಅಭಿಮಾನಿಗಳ ನೆನಪಲ್ಲಿ ವಿಷ್ಣುವರ್ಧನ್ ಸದಾ ಹಸಿರಾಗಿಯೇ ಇದ್ದಾರೆ. ವಿಷ್ಣು ಸ್ಟೈಲ್ ಸಿನಿಮಾ ಬೇಕು ಎನ್ನುತ್ತಿದ್ದಾಗ ಹೊಳೆದ ಕಥೆ ಇದು. ಹೀಗಾಗಿಯೇ ವಿಷ್ಣುವರ್ಧನ್ ಅವರನ್ನು ಗ್ರಾಫಿಕ್ಸ್ ಮೂಲಕ ಮರುಸೃಷ್ಟಿಸಲಾಗಿದೆಯಂತೆ.
ಚಿತ್ರಕ್ಕಾಗಿ 3 ವರ್ಷ ಸಮಯ ತೆಗೆದುಕೊಂಡಿರುವ ಅನಿರುದ್ಧ, ಈ ಚಿತ್ರದ ಮೂಲಕ ಚಾಕಲೇಟ್ ಬಾಯ್ ಇಮೇಜ್‍ನಿಂದ ಹೊರಬರುವ ಉತ್ಸಾಹದಲ್ಲಿದ್ದಾರೆ. ಜಿಮ್‍ಗೆ ಹೋಗಿ ಮೈಕಟ್ಟು ಹುರಿಗೊಳಿಸಿದ್ದಾರೆ. ಚಿತ್ರದಲ್ಲಿ ಅದ್ಭುತ ಎನ್ನಿಸುವಂತಹ ಆ್ಯಕ್ಷನ್ ಸೀನ್‍ಗಳಿವೆಯಂತೆ.
ಸಿಂಹಾದ್ರಿಯಲ್ಲಿ ಸಿಂಹಾದ್ರಿಯ ಸಿಂಹ ನರಸಿಂಹ ಗೌಡನ ಮರಣಾನಂತರ ಆ ಊರು ಏನಾಗುತ್ತೆ..? ಅದನ್ನು ಸರಿಪಡಿಸಲು ಆತನ ಮಗ ಅನಿರುದ್ಧ ಏನು ಮಾಡ್ತಾನೆ ಅನ್ನೋದು ಚಿತ್ರದ ಕಥೆ. ಚಿತ್ರದಲ್ಲಿ ವಿಷ್ಣುವರ್ಧನ್ ಮಗನ ಪಾತ್ರದಲ್ಲಿ ನಟಿಸಿರುವುದು ಅನಿರುದ್ಧ. ತಾಯಿಯ ಪಾತ್ರದಲ್ಲಿ ಭಾರತಿ ನಟಿಸಿದ್ದಾರೆ. ಚಿತ್ರಮಂದಿರಕ್ಕೆ ಬರಲು ಕೆಲವು ಗಂಟೆಗಳಷ್ಟೇ ಬಾಕಿ.