ಚೂರಿಕಟ್ಟೆ ಸಿನಿಮಾ ಬಗ್ಗೆ ಇತ್ತೀಚೆಗೆ ಕೇಳಿಯೇ ಇರ್ತೀರಿ. ಗಣರಾಜ್ಯೋತ್ಸವದ ದಿನ ತೆರೆಗೆ ಬರುತ್ತಿರುವ ಈ ಚಿತ್ರ, ಟಿಂಬರ್ ಮಾಫಿಯಾ ಮತ್ತು ಪೊಲೀಸ್ ವ್ಯವಸ್ಥೆಯ ಕಥೆಯನ್ನೊಳಗೊಂಡಿದೆ. ಅಂದಹಾಗೆ ಚೂರಿಕಟ್ಟೆ ಅನ್ನೋದು ಕಾಲ್ಪನಿಕ ಊರಿನ ಹೆಸರಲ್ಲ. ಚೂರಿಕಟ್ಟೆ ಎಂಬ ಹೆಸರಿನ ಗ್ರಾಮ ಇಂದಿಗೂ ಇದೆ. ಆ ಊರಿಗೊಂದು ಇತಿಹಾಸವೂ ಇದೆ.
ಶಿವಮೊಗ್ಗ ಜಿಲ್ಲೆಯಲ್ಲಿರುವ ಈ ಊರು , ಶಿವಮೊಗ್ಗ ಜಿಲ್ಲೆಯ ಗಡಿ ಎಂದರೆ ತಪ್ಪಾಗಲಿಕ್ಕಿಲ್ಲ. ಈ ಊರಿನಿಂದಲೇ ಕಾರವಾರ ಜಿಲ್ಲೆಯ ಸರಹದ್ದು ಆರಂಭವಾಗುತ್ತೆ. ಈ ಊರಿನಲ್ಲಿ 25ಕ್ಕೂ ಹೆಚ್ಚು ಕುಟುಂಬಗಳಿವೆ. ಬ್ರಿಟಿಷರ ಕಾಲದಲ್ಲಿ ಈ ಊರಿನಲ್ಲಿ ಬ್ರಿಟಿಷ್ ಸೈನಿಕರು ಚೂರಿ ಹಿಡಿದು ಅಡಗಿ ಕುಳಿತು, ಕಳ್ಳರು, ಡಕಾಯಿತರನ್ನು ಹಿಡಿಯುತ್ತಿದ್ದರಂತೆ. ಹೀಗಾಗಿ ಈ ಊರಿಗೆ ಚೂರಿಕಟ್ಟೆ ಅನ್ನೋ ಹೆಸರು ಬಂದಿದೆ.
ಹಾಗಂತ, ಈ ಊರಿಗೂ, ಸಿನಿಮಾದ ಕಥೆಗೂ ಸಂಬಂಧ ಇದೆ ಅಂದ್ಕೋಬೇಡಿ. ಆರಂಭದಲ್ಲಿ ಸಿನಿಮಾ ಟೈಟಲ್‍ಗೆ ವಿರೋಧ ವ್ಯಕ್ತಪಡಿಸಿದ್ದ ಚೂರಿಕಟ್ಟೆ ಗ್ರಾಮದ ಜನ, ಚಿತ್ರದ ಸಂದೇಶ ಮತ್ತು ಕಥೆ ಬಗ್ಗೆ ಕೇಳಿದ ಮೇಲೆ ಸುಮ್ಮನಾಗಿದ್ದಾರೆ. ಅಷ್ಟೇ ಅಲ್ಲ, ತಮ್ಮ ಊರಿನ ಹೆಸರಲ್ಲಿ ಸಿನಿಮಾವೊಂದು ಬರುತ್ತಿದೆ ಎನ್ನುವುದು ಅವರಿಗೂ ಖುಷಿ ಕೊಟ್ಟಿದೆ.