ಚೂರಿಕಟ್ಟೆ... ಈ ವಾರ ತೆರೆಗೆ ಬರುತ್ತಿರುವ ಚಿತ್ರ ಹೊಸ ನಿರ್ದೇಶಕರ ಹೊಸ ಪ್ರಯತ್ನ. ನಿರ್ದೇಶಕ ರಘು ಶಿವಮೊಗ್ಗ ತಮ್ಮ ಮಲೆನಾಡಿನ ಅನುಭವವನ್ನು ಕಣ್ಣಾರೆ ಕಂಡ ಘಟನೆಗಳನ್ನೇ ಚಿತ್ರವನ್ನಾಗಿಸಿದ್ದಾರೆ. ಚಿತ್ರದಲ್ಲಿ ಪ್ರವೀಣ್ ತೇಜ್ ಹಾಗೂ ಪ್ರೇರಣಾ ನಾಯಕ, ನಾಯಕಿ.
ಅಂದಂಗೆ, ಚೂರಿಕಟ್ಟೆ ಕಾಲ್ಪನಿಕ ಸ್ಥಳವೇನೂ ಅಲ್ಲ. ಜೋಗ್‍ಫಾಲ್ಸ್ ಪಕ್ಕದಲ್ಲೇ ಇರೋ ಗ್ರಾಮದ ಹೆಸರು. ಅಲ್ಲಿನ ಕಾಡುಗಳಲ್ಲಿ ಶ್ರೀಗಂಧದ ಕಳ್ಳಸಾಗಣೆ ಲಾಗಾಯ್ತಿನಿಂದಲೂ ನಡೆಯುತ್ತಿತ್ತು. ಚಿತ್ರದಲ್ಲಿ ಆ ಮಾಫಿಯಾದ ಕಥೆಯನ್ನೇ ರೋಚಕವಾಗಿ ಹೇಳಲಾಗಿದೆ.
ಕ್ಷಣ ಕ್ಷಣಕ್ಕೂ ರೋಮಾಂಚನಗೊಳಿಸುವ ಅಂಶಗಳು, ದೃಶ್ಯಗಳು ಚಿತ್ರದಲ್ಲಿವೆ. ನಿಗೂಢತೆಗಳಿವೆ. ಪ್ರೇಮಕತೆಯೂ ಇದೆ. ಚಿತ್ರಮಂದಿರಕ್ಕೆ ಹೊಕ್ಕರೆ, ಹೊರಬರುವವರೆಗೆ ನೀವು ಚೂರಿಕಟ್ಟೆಯ ಟಿಂಬರ್ ಮಾಫಿಯಾ, ನಿಗೂಢತೆಗಳ ಒಳಗೆ ಮುಳುಗಿ ಹೋಗುತ್ತೀರಿ ಎಂಬ ಭರವಸೆ ನಿರ್ದೇಶಕರದ್ದು.