ಕನ್ನಡ ಮೀಡಿಯಂ ರಾಜು ನೋಡೋಕೆ ಹಾಗೆಲ್ಲ ಕಾಣಿಸಿದ್ರೂ, ಪ್ರತಿದಿನ ಜಿಮ್ ಮಾಡಿ ದೇಹವನ್ನು ಕಟ್ಟುಮಸ್ತಾಗಿಟ್ಟುಕೊಂಡಿದ್ದಾರೆ. ಫೈಟಿಂಗ್ ಸಿನಿಮಾಗಳಲ್ಲಿ ನಟಿಸಿಲ್ಲ ಎನ್ನುವ ಕಾರಣಕ್ಕೆ ರಾಜು ಅಲ್ಲಲ್ಲ ಗುರುನಂದನ್, ಹಾಗೆ ಕಾಣಿಸ್ತಾರೆ. ಅಂಥಾ ಗುರುನಂದನ್ 15 ದಿನಗಳಲ್ಲಿ ದೇಹದ ತೂಕವನ್ನು ಕಳೆದುಕೊಂಡ ಕಥೆ ಇದು.
ರಾಜು ಕನ್ನಡ ಮೀಡಿಯಂನಲ್ಲಿ ಗುರುನಂದನ್, ಹೈಸ್ಕೂಲ್ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಎಂಜಿನಿಯರ್, ಉದ್ಯಮಿಯಾಗಿ ನಟಿಸಿರುವ ರಾಜು, ಅದೇ ಚಿತ್ರದಲ್ಲಿ ಹೈಸ್ಕೂಲು ಹುಡುಗನಾಗಿದ್ದಾರೆ. ಅದು ಸಿನಿಮಾ ಶೂಟಿಂಗ್ ಶೆಡ್ಯೂಲ್‍ನ ಕೊನೆ ಹಂತವಾಗಿತ್ತಂತೆ. ನಿರ್ದೇಶಕ ನರೇಶ್ 2 ತಿಂಗಳು ಟೈಂ ಕೊಟ್ಟು, ದೇಹದ ತೂಕ ಇಳಿಸಿಕೊಳ್ಳೋಕೆ ಹೇಳಿದ್ದರಂತೆ. ಆದರೆ, ಸಹಕಲಾವಿದರ ಡೇಟ್ಸ್ ಮತ್ತು ಹಸಿರು ಪ್ರಕೃತಿಗಾಗಿ ಕೇವಲ 15 ದಿನ ಗ್ಯಾಪ್‍ನಲ್ಲೇ ಶೂಟಿಂಗ್ ಮಾಡಬೇಕಾಗಿ ಬಂತಂತೆ. ಆಗ ಶುರುವಾಗಿದ್ದೇ ಗುರುನಂದನ್‍ರ ಈ ಸ್ಲಿಮ್ ಥೆರಪಿ.
15 ದಿನ ಕೇವಲ ಬೇಯಿಸಿದ ತರಕಾರಿ, ಮೊಟ್ಟೆಯ ಬಿಳಿಭಾಗ ಮತ್ತು ಗ್ರಿಲ್ಡ್ ಚಿಕನ್‍ಗಳನ್ನಷ್ಟೇ ತಿಂದಿದ್ದೇನೆ. ಇದರಿಂದಾಗಿ 15 ದಿನಗಳಲ್ಲಿ 10 ಕೆಜಿ ತೂಕ ಕಳೆದುಕೊಂಡೆ ಎಂದು ಅನುಭವ ಹಂಚಿಕೊಂಡಿದ್ದಾರೆ ಗುರುನಂದನ್.
ಗುರುನಂದನ್ ಒಬ್ಬರೇ ಅಲ್ಲ, ಚಿತ್ರದ ನಿರ್ಮಾಪಕ ಸುರೇಶ್, ನಿರ್ದೇಶಕ ನರೇಶ್, ನಟಿಯರಾದ ಆವಂತಿಕಾ ಶೆಟ್ಟಿ, ಆಶಿಕಾ ರಂಗನಾಥ್ ಸೇರಿದಂತೆ ಪ್ರತಿಯೊಬ್ಬರಿಗೂ ಚಿತ್ರದಲ್ಲಿ ಹೇಳಿಕೊಳ್ಳೋಕೆ ಇಂಥ ಅನುಭವದ ಕಥೆಗಳಿವೆ. ಇನ್ನು ಇದೇ ವಾರ ರಿಲೀಸ್ ಆಗುತ್ತಿರುವ ಚಿತ್ರಕ್ಕೆ ಕಿಚ್ಚ ಸುದೀಪ್ ಪ್ರಮುಖ ಪಾತ್ರದಲ್ಲಿದ್ದಾರೆ ಎನ್ನುವ ದೊಡ್ಡ ಮೈಲೇಜ್ ಕೂಡಾ ಇದೆ.