3 ದಿನ 30 ಗಂಟೆ 30 ಸೆಕೆಂಡ್ ಅನ್ನೋ ವಿಭಿನ್ನ ಟೈಟಲ್ ಸಿನಿಮಾದಿಂದ ಗಮನ ಸೆಳೆದಿರುವ ಚಿತ್ರದ ನಿರ್ದೇಶಕ ಮಧುಸೂದನ್. ನಿರ್ದೇಶನ ಹೊಸದಲ್ಲ. ಆ್ಯಡ್ ಫಿಲಂ, ಕಿರುಚಿತ್ರ, ಟೆಲಿ ಸೀರಿಯಲ್ ಮಾಡಿದ ಅನುಭವವಿದೆ. ಸಿನಿಮಾ ಮಾತ್ರ ಹೊಸದು. ವಿಭಿನ್ನವಾಗಿ ಕಥೆ ಹೇಳುವ ಮಧುಸೂದನ್ ಅವರಿಗೆ ಕಥೆ ಹೇಳುವ ಖಯಾಲಿ ಶುರುವಾಗಿದ್ದು ಅವರು 2ನೇ ಕ್ಲಾಸ್‍ನಲ್ಲಿದ್ದಾಗ.
ಅಪ್ಪ ಸಿನಿಮಾ ಆಪರೇಟರ್ ಆಗಿದ್ದರು. ಚಿತ್ರದ ಪ್ರಿಂಟ್‍ಗಳನ್ನು ಒಮ್ಮೊಮ್ಮೆ ಮನೆಗೂ ತಂದು ಪರಿಶೀಲಿಸುತ್ತಿದ್ದರು. ಆದರೆ, ಮಧುಸೂದನ್‍ಗೆ ಇಷ್ಟವಾಗಿದ್ದು ಆ ನೆಗೆಟಿವ್, ತಂತ್ರಜ್ಞಾನಕ್ಕಿಂತ ಕಥೆ. ಹೀಗಾಗಿ 2ನೇ ಕ್ಲಾಸ್‍ನಲ್ಲಿದ್ದಾಗಲೇ ಕಥೆ ಹೇಳುವ ಖಯಾಲಿಗೆ ಬಿದ್ದರು.
ಪುಟ್ಟ ಹುಡುಗನ ಉತ್ಸಾಹಕ್ಕೆ ಶಾಲೆಯಲ್ಲಿ ಪ್ರೋತ್ಸಾಹವೂ ಸಿಕ್ಕಿತು. ಮಧುಸೂದನ್ ಕತೆ, ಕವನಗಳನ್ನೆಲ್ಲ ಬರೆದು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಮಿಂಚಿದರು. ದೊಡ್ಡವರಾಗುತ್ತಾ ಆಗುತ್ತಾ ಹೆಚ್ಚು ಹೆಚ್ಚು ಓದುತ್ತಾ ಹೋದರು. ತೇಜಸ್ವಿ, ಯಂಡಮೂರಿ ವೀರೇಂದ್ರನಾಥ್, ನಾಗೇಶ್ ಹೆಗಡೆ, ತರಾಸು, ಎಸ್.ಎಲ್.ಭೈರಪ್ಪ ಮೊದಲಾದವರೆಂದರೆ ಇಷ್ಟ.
ಹೀಗೆ ಚಿಕ್ಕ ವಯಸ್ಸಿನಿಂದ ಶುರುವಾದ ಕಥೆ ಹೇಳುವ ಅಭ್ಯಾಸ, ಓದಿನ ವ್ಯಾಪ್ತಿ, ಜೀವನ ಹಾಗೂ ಜೀವನದ ಸಾಹಸಗಳೇ ಸಿನಿಮಾದಲ್ಲಿದೆ. ಅಫ್‍ಕೋರ್ಸ್ ಅದೊಂದು ಜೀವನ ಕಥೆಯೂ ಹೌದು. ಒಂದು ಅಪ್ಪಟ ಮನರಂಜನೆಯ ಜೊತೆ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ ಮಧುಸೂದನ್.