ಹಿಂದಿಯ ಕ್ವೀನ್ ಚಿತ್ರ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂಗೆ ರೀಮೇಕ್ ಆಗುತ್ತಿರುವುದು ಗೊತ್ತಿರುವ ವಿಚಾರವೇ. ಕನ್ನಡದಲ್ಲಿ ಪಾರುಲ್ ಯಾದವ್ ಕ್ವೀನ್ ಆಗಿದ್ದಾರೆ. ಬಟರ್ ಫ್ಲೈ ಹೆಸರಿನಲ್ಲಿ ಅದ್ದೂರಿಯಾಗಿ ಸಿದ್ಧವಾಗುತ್ತಿರುವ ಚಿತ್ರಕ್ಕೆ ರಮೇಶ್ ಅರವಿಂದ್ ನಿರ್ದೇಶನವಿದೆ.
ರಮೇಶ್ ಅರವಿಂದ್ ಕನ್ನಡಕ್ಕಷ್ಟೇ ಅಲ್ಲ, ತಮಿಳು ಚಿತ್ರಕ್ಕೂ ನಿರ್ದೇಶಕರಾಗಿದ್ದರು. ಈಗ ಅವರಿಗೆ ತೆಲುಗಿನ ನಿರ್ದೇಶನದ ಹೊಣೆಯೂ ಹೆಗಲೇರಿದೆ.
ಕನ್ನಡದಲ್ಲಿ ಪಾರುಲ್ ಯಾದವ್ ಮಾಡುತ್ತಿರುವ ಪಾತ್ರವನ್ನು, ತೆಲುಗಿನಲ್ಲಿ ಮಾಡ್ತಾ ಇರೋದು ತಮನ್ನಾ ಭಾಟಿಯಾ. ಆದರೆ, ಈ ಮಿಲ್ಕಿ ಬ್ಯೂಟಿಗೂ ನಿರ್ದೇಶಕ ನೀಲಕಂಠ ಅವರಿಗೂ ಹೊಂದಾಣಿಕೆಯಾಗಿಲ್ಲ. ಕೆಲವು ಶಾಟ್ಸ್ ತೆಗೆಯುವ ವಿಚಾರಕ್ಕೆ ಸಂಬಂಧಪಟ್ಟಂತೆ ಇಬ್ಬರ ಮಧ್ಯೆ ಮನಸ್ತಾಪ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ತೆಲುಗು ವರ್ಷನ್‍ನ ಹೊಣೆಯೂ ರಮೇಶ್ ಅರವಿಂದ್ ಹೆಗಲಿಗೇ ಬಿದ್ದಿದೆ.
ಪಾರುಲ್ ಯಾದವ್ ಅಭಿನಯದ ಬಟರ್ ಫ್ಲೈ ಮೇ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಕನ್ನಡದಲ್ಲಿ ನಿರ್ಮಾಪಕಿಯೂ ಆಗಿರುವ ಪಾರುಲ್ ಯಾದವ್, ಚಿತ್ರದ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.