ಮಹದಾಯಿ ಕುರಿತ ವಿಚಾರದಲ್ಲಿ ಕನ್ನಡ ಚಿತ್ರರಂಗ ಬೆಂಬಲ ನೀಡುತ್ತಿಲ್ಲ ಎಂಬ ಆರೋಪ ಇತ್ತೀಚೆಗೆ ಕೇಳಿಬಂದಿತ್ತು. ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ ಮಹದಾಯಿ ಹೋರಾಟಗಾರರಿಗೆ ಚಿತ್ರರಂಗದ ಹಲವರು ಬೆಂಬಲ ವ್ಯಕ್ತಪಡಿಸಿದ್ದರಾದರೂ, ಒಂದು ಪಕ್ಷದ ವಿರುದ್ಧ ನಡೆಯುವ ಹೋರಾಟ ಸರಿಯಲ್ಲ ಎಂದು ವಿರೋಧಿಸಿದ್ದರು. ಎಲ್ಲ ಪಕ್ಷಗಳ ವಿರುದ್ಧ ಒಗ್ಗಟ್ಟಾಗಿ ಹೋರಾಡುವ ಘೋಷಣೆ ಮೊಳಗಿಸಿದ್ದರು. ಈಗ ನಿರ್ಧಾರ ಹೊರಬಿದ್ದಿದೆ.
ಮಹದಾಯಿಗೆ ಬೆಂಬಲ ಸೂಚಿಸಿ ಜನವರಿ 27ರಂದು ಕರ್ನಾಕಟ ಬಂದ್ಗೆ ಕರೆ ನೀಡಲಾಗಿದೆ. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ಗೆ ಕರೆ ಕೊಟ್ಟಿವೆ. ಫಿಲಂ ಚೇಂಬರ್ ಕೂಡಾ ಬೆಂಬಲ ಘೋಷಿಸಿದೆ. ಆ ದಿನ ಕನ್ನಡ ಚಿತ್ರರಂಗದಲ್ಲಿ ಯಾವುದೇ ಸಿನಿಮಾದ ಶೂಟಿಂಗ್ ಸಹಾ ಇರುವುದಿಲ್ಲ ಎಂದು ಘೋಷಿಸಿದ್ದಾರೆ ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು.
ಅಂದಹಾಗೆ ಪ್ರಧಾನಿ ನರೇಂದ್ರ ಮೋದಿ ಜನವರಿ 28ರಂದು ಕರ್ನಾಟಕಕ್ಕೆ ಬರುತ್ತಿದ್ದಾರೆ. ಮೋದಿ ಬರುವ ಒಂದು ದಿನ ಮುನ್ನ, ಪ್ರಧಾನಿಗೆ ಮಹದಾಯಿ ವಿಚಾರ ತಲುಪಿಸಲೆಂದೇ ಈ ಬಂದ್ಗೆ ಕರೆ ನೀಡಲಾಗಿದೆ. ಅಂದಹಾಗೆ ಬಂದ್ ಒಬ್ಬರ ವಿರುದ್ಧ ಅಲ್ಲ. ಗೋವಾ ಸಿಎಂ ಪತ್ರವನ್ನಿಟ್ಟುಕೊಂಡು ಬಿಜೆಪಿ ಮಾಡಿದ ರಾಜಕೀಯದ ವಿರುದ್ಧ. ಒಂದು ಪತ್ರ ಕೈ ಸೇರಿದ ನಂತರ, ಅದನ್ನು ರಾಜಕಾರಣಕ್ಕಷ್ಟೇ ಬಳಸಿ, ಹೇಗೋ ಸಿಕ್ಕಿದ್ದ ಒಂದು ಅವಕಾಶವನ್ನು ಹಾಳು ಮಾಡಿದ ಕಾಂಗ್ರೆಸ್ ವಿರುದ್ಧ. ಎರಡೂ ಪಕ್ಷಗಳನ್ನು ಟೀಕಿಸುವುದರಲ್ಲೇ ಕಾಲಕಳೆದ ಜೆಡಿಎಸ್ ವಿರುದ್ಧ. ಹೀಗೆ ಎಲ್ಲ ಪಕ್ಷಗಳ ವಿರುದ್ಧವೂ ಈ ಬಂದ್ ನಡೆಯುತ್ತಿದೆ.