ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಿನಿಮಾ ನಟರ ರಾಜಕೀಯ ಪ್ರವೇಶ ಸುದ್ದಿಗಳಿಗೆ ವೇಗ ಬಂದುಬಿಟ್ಟಿದೆ. ಸಕ್ರಿಯ ರಾಜಕಾರಣದಲ್ಲಿರುವ ಅಂಬರೀಷ್, ಜಗ್ಗೇಶ್, ರಮ್ಯಾ, ಉಮಾಶ್ರೀ, ಜಯಮಾಲಾ, ತಾರಾ, ಭಾವನಾ, ಬಿ.ಸಿ.ಪಾಟೀಲ್ ಮೊದಲಾದವರ ಕಥೆ ಬೇರೆ. ದರ್ಶನ್, ಸುದೀಪ್ ಮೊದಲಾದವರ ಕಥೆಯೇ ಬೇರೆ. ಆದರೆ, ನಾವಿಲ್ಲಿ ಹೇಳ್ತಿರೋದು ಗಣೇಶ್ ಸಮಾಚಾರ.
ಗೋಲ್ಡನ್ ಸ್ಟಾರ್ ಗಣೇಶ್‍ಗೆ ರಾಜಕೀಯ ಹೊಸದೇನಲ್ಲ. ಹಾಗಂತ ಅವರು ಯಾವುದೇ ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಂಡವರೂ ಅಲ್ಲ. ಆದರೆ. ಅವರ ಪತ್ನಿ ಶಿಲ್ಪಾ ಹಾಗಲ್ಲ. ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತೆಯಾಗಿರುವ ಶಿಲ್ಪಾ, ಫೈರ್‍ಬ್ರಾಂಡ್. ಅದರಲ್ಲೂ ಇತ್ತೀಚೆಗೆ ನಟಿ ರಮ್ಯಾ ಅವರನ್ನು ಟ್ವಿಟರ್‍ನಲ್ಲಿ ತರಾಟೆಗೆ ತೆಗೆದುಕೊಂಡಿದ್ದವರಲ್ಲಿ ಶಿಲ್ಪಾ ಮೊದಲಿಗರಾಗಿದ್ದರು.
ಈಗ ಶಿಲ್ಪಾ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆಯುವ ಆಕಾಂಕ್ಷಿಯಾಗಿದ್ದಾರೆ. ಅದು ಚಿತ್ರ ನಿರ್ಮಾಪಕರೂ ಆಗಿರುವ ಮುನಿರತ್ನ ಅವರ ಕ್ಷೇತ್ರ ಎನ್ನುವುದು ವಿಶೇಷ. ಪತ್ನಿಗೆ ಟಿಕೆಟ್ ಸಿಕ್ಕರೆ, ಆಕೆಯ ಪರ ಪ್ರಚಾರ ಮಾಡಲು ನಾನು ರೆಡಿ ಎಂದಿದ್ದಾರೆ ಗಣೇಶ್.
ನಮಗೆ ರಾಜಕೀಯದಿಂದ ಹಣ ಮಾಡುವ ಅಗತ್ಯವಿಲ್ಲ. ಈಗ.. ದೇವರು ಎಲ್ಲವನ್ನೂ ಕೊಟ್ಟಿದ್ದಾನೆ. ರಾಜಕೀಯ ಶಿಲ್ಪಾಗೆ ಪ್ಯಾಷನ್. ಸಾಮಾಜಿಕ ಕಳಕಳಿಯಿರುವವರು. ಟಿಕೆಟ್ ಸಿಕ್ಕರೆ ಇಡೀ ಕ್ಷೇತ್ರದಲ್ಲಿ ಪ್ರಚಾರ ಮಾಡೋದಾಗಿ ಹೇಳಿದ್ದಾರೆ ಗಣೇಶ್.