30 ಗಂಟೆ 30 ದಿನ 30 ಸೆಕೆಂಡು.. ಕೇವಲ ಟೈಟಲ್‍ನಿಂದಷ್ಟೇ ಅಲ್ಲ, ವಿಭಿನ್ನ ಕಥಾ ಹಂದರವೂ ಕುತೂಹಲ ಕೆರಳಿಸುತ್ತಿದೆ. ಸ್ಪೆಷಲ್‍ಗಳ ಮೂಟೆಯನ್ನೇ ಹೊತ್ತು ತರುತ್ತಿರುವ ಚಿತ್ರದಲ್ಲಿ 80, 90ರ ದಶಕದ ಹಲವು ತಾರೆಯರು ಒಟ್ಟಿಗೇ ಸೇರಿರುವುದು ಇನ್ನೊಂದು ವಿಶೇಷ.
ನಾಯಕ ಅರೂ ಗೌಡ, ನಾಯಕಿ ಕಾವ್ಯಾ ಶೆಟ್ಟಿ. ಇಬ್ಬರ ಚಾಲೆಂಜ್‍ನಿಂದ ಶುರುವಾಗುವ ಕಥೆಯಲ್ಲಿ ಎಡಕಲ್ಲು ಗುಡ್ಡದ ಚಂದ್ರಶೇಖರ್, ನಾಯಕಿಯ ತಂದೆಯ ಪಾತ್ರದಲ್ಲಿದ್ದಾರೆ. ಮಗಳ ಮೇಲಿನ ಮಮಕಾರದಿಂದ ಎಲ್ಲ ಅಪಾಯಗಳನ್ನೂ ಮೈಮೇಲೆ ಎಳೆದುಕೊಳ್ಳುವ ಅಪ್ಪನ ಪಾತ್ರ ಚಂದ್ರಶೇಖರ್ ಅವರದ್ದು.
ಮುಕ್ತಮುಕ್ತ ಖ್ಯಾತಿಯ ಜಯಲಕ್ಷ್ಮಿ ಅವರದ್ದು ತ್ಯಾಗಮಯಿ ಪಾತ್ರದಲ್ಲಿದ್ದರೆ, ನಟಿ ಯಮುನಾ ನಾಯಕನ ತಾಯಿಯ ಪಾತ್ರದಲ್ಲಿದ್ದಾರೆ. ಮಗನ ಒಳಿತಿಗಾಗಿ ಸದಾ ಪರಿತಪಿಸುವ ಹೆಂಗರುಳಿನ ಪಾತ್ರ ಯಮುನಾ ಅವರದ್ದು. ಇನ್ನು ಸುಂದರ್ ಅವರದ್ದು ನಾಯಕನ ತಂದೆಯ ಪಾತ್ರ.
ಇನ್ನು ಇಡೀ ಚಿತ್ರದಲ್ಲಿನ ಅತಿ ದೊಡ್ಡ ಅಟ್ರ್ಯಾಕ್ಷನ್ ದೇವರಾಜ್-ಸುಧಾರಾಣಿ. ದೇವರಾಜ್ ಕಣ್ಣು ಕಾಣಿಸದ, ಕಿವಿ ಕೇಳಿಸದ, ಮಾತೂ ಬಾರದ ನಿವೃತ್ತ ಮಿಲಿಟರಿ ಆಫೀಸರ್ ಪಾತ್ರದಲ್ಲಿದ್ದರೆ, ಸುಧಾರಾಣಿ ದೇವರಾಜ್‍ಗೆ ಜೋಡಿಯಾಗಿದ್ದಾರೆ. ಆಕೆ ದೇವರಾಜ್‍ಗೆ ಟೀಚರ್ ಕೂಡಾ ಹೌದು.
30 ಸೆಕೆಂಡ್‍ನ ವಿಶೇಷಗಳು ಇನ್ನೂ ಹಲವಾರಿವೆ. ವಿಶೇಷಗಳನ್ನೆಲ್ಲ ಜನವರಿ 19ರ ಥಿಯೇಟರುಗಳಲ್ಲಿ ಕಣ್ತುಂಬಿಕೊಳ್ಳಬಹುದು.