ಪ್ಯಾರ್ ಗೇ ಪಾರುಲ್ ಪಾರ್ವತಿಯಾಗಿದ್ದಾರೆ. ಚಿಟ್ಟಯಾಗಿದ್ದಾರೆ. ಬಟರ್ ಫ್ಲೈನಂತೆ ಹಾರುತ್ತಿದ್ದಾರೆ. ಹಾರಿರುವುದು ಪ್ಯಾರಿಸ್‍ನಲ್ಲಿ. ಹಾರಿಸಿರುವುದು ರಮೇಶ್ ಅರವಿಂದ್. ಇದು ಬಟರ್ ಫೈ ಚಿತ್ರದ ಶೂಟಿಂಗ್ ಕಥೆ. 45 ದಿನಗಳ ಪ್ಯಾರಿಸ್ ಶೂಟಿಂಗ್ ಮುಗಿಸಿರುವ ಪಾರುಲ್, ಚಿತ್ರದ ನಿರ್ಮಾಪಕಿಯರಲ್ಲಿ ಒಬ್ಬರು.
ಏಕಕಾಲದಲ್ಲಿ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಸಿದ್ಧವಾಗುತ್ತಿದೆ ಬಟರ್ ಫ್ಲೈ. ಕನ್ನಡದಲ್ಲಿ ಪಾರುಲ್ ಯಾದವ್ ಗೋಕರ್ಣದ ಪಾರ್ವತಿಯಾಗಿ ನಟಿಸಿದ್ದಾರೆ. ಸತತ 45 ದಿನ ಪ್ಯಾರಿಸ್‍ನಲ್ಲಿದ್ದ ಪಾರುಲ್‍ಗೆ ಅದೊಂದು ಹಿತಾನುಭವ. ಇಂಡಿಯಾ ಬಿಟ್ಟು, ಬೇರೆಲ್ಲೂ ಇಷ್ಟು ಸುದೀರ್ಘ ಕಾಲ ಇರಲಿಲ್ಲವಂತೆ. ಈಗಲೂ ಪ್ಯಾರಿಸ್ ಗುಂಗು ಕಾಡುತ್ತಿದೆ ಎನ್ನುವ ಪಾರುಲ್, ಚಿತ್ರಕ್ಕಾಗಿ ಒಂದೂವರೆ ವರ್ಷ ಮೀಸಲಿಟ್ಟಿದ್ದಾರೆ. ಇದು ಜಾಸ್ತಿ ಅಯ್ತಲ್ವಾ ಎಂದರೆ, ಬಾಹುಬಲಿ ಚಿತ್ರಕ್ಕಾಗಿ ಪ್ರಭಾಸ್ ಮೂರೂವರೆ ವರ್ಷ ಮೀಸಲಿಟ್ಟಿದ್ದರು. ಅದರ ಮುಂದೆ ನನ್ನದೇನು ಮಹಾ ಅಂತಾರೆ.
ತಮನ್ನಾ, ಕಾಜಲ್ ಮತ್ತು ಮಂಜಿಮಾ ಮೋಹನ್, ತೆಲುಗು, ತಮಿಳು, ಮಲಯಾಳಂ ಹೀರೊಯಿನ್‍ಗಳು. ಎಲ್ಲರೂ ಒಂದೇ ಸೆಟ್‍ನಲ್ಲಿದ್ದದ್ದು ವಿಶೇಷ. ಅಂದಹಾಗೆ ಇದು ಹಿಂದಿನ ಕ್ವೀನ್ ಚಿತ್ರದ ರೀಮೇಕ್. ಹನಿಮೂನ್‍ಗೆ ಬರುವ ಹಳ್ಳಿ ಹುಡುಗಿಯ ಬೆರಗುಗಳನ್ನು ಕ್ವೀನ್ ಅದ್ಭುತವಾಗಿ ಕಟ್ಟಿಕೊಟ್ಟಿತ್ತು. ಆ ಚಿತ್ರವನ್ನು ಕನ್ನಡಕ್ಕೆ ತರಬೇಕು ಎನ್ನುವುದು ನನ್ನ ಹಂಬಲ ಎಂದು ಹೇಳಿಕೊಂಡಿದ್ದಾರೆ.
ನಾನೀನ ಕನ್ನಡತಿ. ನನ್ನನ್ನು ಪ್ರೀತಿಸಿದವರು, ಬೆಳೆಸಿದವರು ಕನ್ನಡದವರು ಎಂದು ಅಭಿಮಾನದಿಂದ ಹೇಳಿಕೊಳ್ಳುವ ಪಾರುಲ್ ಯಾದವ್, ಕನ್ನಡದ ಟೀಚರ್ ಒಬ್ಬರಿಂದ ಹೇಳಿಸಿಕೊಂಡು ಕನ್ನಡವನ್ನು ಸ್ಪಷ್ಟವಾಗಿ ಕಲಿತಿದ್ದಾರೆ. ಕನ್ನಡತಿಯೇ ಆಗಿಬಿಟ್ಟಿದ್ದಾರೆ. ಸಿನಿಮಾ ಮೇ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.