ಡ್ಯಾನಿಷ್ ಸೇಟ್. ಹೆಸರು ಕೇಳಿದರೆ, ಇವರ್ಯಾರೋ ಕನ್ನಡಿಗರೇ ಅಲ್ಲ ಅಂತೀರೇನೋ. ಆದರೆ, ಇವರು ಮೂಲತಃ ಮೈಸೂರಿನವರು. ಓದಿದ್ದು ಕರ್ನಾಟದಲ್ಲೇ. ರೇಡಿಯೋ ಜಾಕಿಯಾಗಿ ವೃತ್ತಿ ಜೀವನ ಆರಂಭಿಸಿದ ಡ್ಯಾನಿಷ್ ಸೇಟ್, ಕಾಫಿ ವಿತ್ ಕರಣ್ ಕಾರ್ಯಕ್ರಮದ ರೂವಾರಿಗಳಲ್ಲಿ ಒಬ್ಬರು. ವಯಸ್ಸಿನ್ನೂ 29 ವರ್ಷ. ಈಗ ರಾಜಕಾರಣಿಯಾಗಿಬಿಟ್ಟಿದ್ದಾರೆ.
ನಾವು ಹೇಳ್ತಾ ಇರೋದು ಹಂಬಲ್ ಪೊಲಿಟಿಷಿಯನ್ ನೋಗರಾಜ್ ಕುರಿತು ಅನ್ನೊದನ್ನ ಬಿಡಿಸಿ ಹೇಳಬೇಕಿಲ್ಲ. ಆರ್‍ಸಿಬಿಯಲ್ಲಿ ಮಿ.ನಾಗ್ ಎಂದೇ ಖ್ಯಾತರಾಗಿದ್ದ ಡ್ಯಾನಿಷ್ ಸೇಟ್, ಸೃಷ್ಟಿಸಿದ ಕಾಮಿಡಿ ವಿಡಿಯೋಗಳಿಗೆ ಲೆಕ್ಕವೇ ಇಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಕೊಹ್ಲಿ, ಗೇಲ್‍ರನ್ನು ಇಷ್ಟಪಡುವಷ್ಟೇ ಮಿ.ನಾಗ್‍ರನ್ನೂ ಇಷ್ಟಪಡುತ್ತಾರೆ.
ಈಗ ಡ್ಯಾನಿಷ್ ಅವರೇ ಹೀರೋ ಆಗಿರುವ ಹಂಬಲ್ ಪೊಲಿಟಿಷಿಯನ್ ನೋಗರಾಜ್, ತೆರೆಗೆ ಸಿದ್ಧವಾಗಿದೆ. ಅದೊಂದು ಪಕ್ಕಾ ರಾಜಕೀಯ ವಿಡಂಬನೆಯ ಚಿತ್ರ. ಸಾದ್ ಖಾನ್ ನಿರ್ದೇಶನದ ಈ ಚಿತ್ರಕ್ಕೆ ಬಂಡವಾಳ ಹೂಡಿರುವುದು ರಕ್ಷಿತ್ ಶೆಟ್ಟಿ, ಹೇಮಂತ್ ರಾವ್ ಹಾಗೂ ಪುಷ್ಕರ್ ಮಲ್ಲಿಕಾರ್ಜುನಯ್ಯ. ಇದು ರಕ್ಷಿತ್ ಫಿಲ್ಮ್ ಫ್ಯಾಕ್ಟರಿಯ ಸಿನಿಮಾ. ಚಿತ್ರದ ಕಥೆ ಕೂಡಾ ಡ್ಯಾನಿಷ್ ಸೇಟ್ ಅವರದ್ದೇ.
ಇವರ ಜೊತೆ ಶೃತಿ ಹರಿಹರನ್ ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ. ಹೂಸ ವರ್ಷ ಜನವರಿ 12 ರಂದು ನುಗ್ಗುತ್ತಿರುವ ಹಂಬಲ್ ಪೊಲಿಟಿಷಿಯನ್ ನೋಗರಾಜ್, ವಿಡಂಬನೆಯ ಮೂಲಕವೇ ನಕ್ಕು ನಗಿಸೋದ್ರಲ್ಲಿ ಅನುಮಾನವಿಲ್ಲ.