ವಿಷ್ಣುವರ್ಧನ್ ಅವರ ಸಮಾಧಿ ಇರುವುದು ಅಭಿಮಾನ್ ಸ್ಟುಡಿಯೋದಲ್ಲಿ. ಅಲ್ಲಿಂದ ಸಮಾಧಿಯನ್ನು ಮೈಸೂರಿಗೆ ಸ್ಥಳಾಂತರಿಸಿ ಅಲ್ಲಿ ಸ್ಮಾರಕ ನಿರ್ಮಿಸಬೇಕು ಎಂಬ ವಾದ ಒಂದು ಕಡೆ, ಸಮಾಧಿ ಇಲ್ಲಿಯೇ ಇರಲಿ, ಸ್ಮಾರಕವೂ ಇಲ್ಲಿಯೇ ಆಗಲಿ ಎನ್ನುವ ಹೋರಾಟ ಮತ್ತೊಂದು ಕಡೆ. ಈ ಎರಡು ವಾದಗಳ ಮಧ್ಯೆ ವಿಷ್ಣುವರ್ಧನ್ ಸ್ಮಾರಕದ ಕನನು ಕನಸಾಗಿಯೇ ಉಳಿದುಬಿಟ್ಟಿದೆ.
ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿರುವ ಕಿಚ್ಚ ಸುದೀಪ್, ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಹೋರಾಟಕ್ಕೆ ಮತ್ತೆ ಬಲ ತಂದಿದ್ದಾರೆ. ಅವರು ಸಿದ್ದರಾಮಯ್ಯನವರನ್ನು ಕೇಳಿರುವುದು ಇಷ್ಟೆ. ವಿಷ್ಣು ಅವರ ಸಮಾಧಿ ಇರುವ ಜಾಗ ಪುಣ್ಯಭೂಮಿ. ಅದನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸುವುದು ಬೇಡ. ಬಾಲಕೃಷ್ಣ ಅವರ ಕುಟುಂಬಕ್ಕೆ ಪರಿಹಾರವನ್ನು ಕೊಡಿ. ಅವರ ಕುಟುಂಬದ ಮೇಲೆ ಸರ್ಕಾರ ಹಾಕಿರುವ ಕೇಸ್ಗಳನ್ನು ವಾಪಸ್ ತೆಗೆದಕೊಂಡರೆ ವಿವಾದ ಬಗೆಹರಿಯಬಹುದು. ಖುದ್ದು ನೀವೇ ಸಂಧಾನ ನಡೆಸಿ, ಮಾತನಾಡಿದರೆ, ಬಾಲಕೃಷ್ಣ ಕುಟುಂಬಸ್ಥರು ಒಪ್ಪಿಯೇ ಒಪ್ಪುತ್ತಾರೆ ಎಂದು ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದಾರೆ ಸುದೀಪ್.
ಸಮಾಧಿ ಜಾಗದ ಸಮಸ್ಯೆಯೊಂದನ್ನು ಬಗೆಹರಿಸಿಬಿಡಿ. ಆ ಜಾಗವನ್ನು ನಮಗೆ ಕೊಡಿ. ವಿಷ್ಣು ಅಭಿಮಾನಿಗಳೊಂದಿಗೆ ನಾವು ಆ ಜಾಗವನ್ನು ಅಭಿವೃದ್ಧಿಪಡಿಸುತ್ತೇವೆ. ಇದನ್ನು ಹೊರತುಪಡಿಸಿ, ಸರ್ಕಾರ ಮಾಡಲು ಉದ್ದೇಶಿಸಿರುವ ಸ್ಮಾರಕವನ್ನು ಎಲ್ಲಿ ಬೇಕಾದರೂ ನಿರ್ಮಿಸಿ. ಅದಕ್ಕೆ ನಮ್ಮ ತಕರಾರಿಲ್ಲ ಎಂದಿದ್ದಾರೆ ಸುದೀಪ್.
ವಿಷ್ಣುವರ್ಧನ್ ನಿಧನರಾಗಿ ಇದೇ ಡಿಸೆಂಬರ್ 30ಕ್ಕೆ 8 ವರ್ಷ ತುಂಬಲಿದೆ. ಆದರೆ, ಸಮಾಧಿಯ ಜಾಗದಲ್ಲಿ ವಿಷ್ಣು ಅವರ ನೆನಪಿಗಾಗಿ ಏನೆಂದರೆ ಏನೂ ಇಲ್ಲ. ಹೀಗಾಗಿಯೇ, ಅದರ ಜವಾಬ್ದಾರಿಯನ್ನು ಅಭಿಮಾನಿಗಳ ಜೊತೆ ಸ್ವತಃ ತಾವು ಹೊತ್ತುಕೊಳ್ಳೋದಾಗಿ ಹೇಳಿದ್ದಾರೆ ಸುದೀಪ್. ಹಾಗೆಂದು ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ವಿಷ್ಣು ಅವರ ಸ್ಮಾರಕಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ ಎನ್ನುವುದು ಗಮನಾರ್ಹ. ಅಭಿಮಾನವೆಂದರೆ ಇದೇ ಅಲ್ಲವೆ.