` ಚಿತ್ರಲೋಕದಿಂದ `ನಾನು ಪಾರ್ವತಿ' ಇಂದು ಬಿಡುಗಡೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
naanu parvathi book launch
Naanu Parvathi Book Launch Today

ಪಾರ್ವತಮ್ಮ ರಾಜ್‍ಕುಮಾರ್, ಕನ್ನಡ ಚಿತ್ರರಂಗಕ್ಕೆ ಕೇವಲ ನಿರ್ಮಾಪಕಿಯಷ್ಟೇ ಆಗಿರಲಿಲ್ಲ, ರಾಜ್ ಪತ್ನಿಯಷ್ಟೇ ಆಗಿರಲಿಲ್ಲ, ಶಿವರಾಜ್, ರಾಘವೇಂದ್ರ, ಪುನೀತ್‍ರ ತಾಯಿಯಷ್ಟೇ ಆಗಿರಲಿಲ್ಲ. ಆಕೆ, ಒಂದು ಶಕ್ತಿ. ಒಂದು ಸ್ಫೂರ್ತಿ. ಆ ಸ್ಫೂರ್ತಿಯ ಕಥೆ ಈಗ ಅಕ್ಷರ ರೂಪದಲ್ಲಿದೆ. `ನಾನು ಪಾರ್ವತಿ' ಜೋಗಿ ಅವರ ಈ ಕೃತಿಯ ಬಿಡುಗಡೆ ಇಂದು.

ಚಿತ್ರಲೋಕ ಪ್ರಕಾಶನದಿಂದ ಹೊರಬರುತ್ತಿರುವ `ನಾನು ಪಾರ್ವತಿ' ಕೇವಲ ಪುಸ್ತಕವಲ್ಲ, ಜೀವನ ಸ್ಫೂರ್ತಿಯಾಗಬಲ್ಲದು. ಏಕೆಂದರೆ, ಪಾರ್ವತಮ್ಮನವರ ಬದುಕೇ ಅಂಥದ್ದು. ಅದು ಕೇವಲ ಯಶಸ್ಸಿನ ಪಯಣವಲ್ಲ, ಎದುರಾದ ಪ್ರತಿ ಕಷ್ಟಗಳನ್ನೂ ಮೆಟ್ಟಿ ನಿಂತು ಗೆದ್ದ ದಿಟ್ಟ ಮಹಿಳೆಯ ಹೋರಾಟದ ಕಥೆ. ಸಾಧನೆ, ಯಶಸ್ಸು ಎನ್ನುವುದು ಸಲೀಸಾಗಿ ಸಿಕ್ಕುವುದಿಲ್ಲ ಎನ್ನುವುದಕ್ಕೆ ಪಾರ್ವತಮ್ಮನವರ ಬದುಕಿಗಿಂತ ದೊಡ್ಡ ಪಾಠ ಬೇಕಿಲ್ಲ. 

ಈ ಪುಸ್ತಕ ಚಿತ್ರಲೋಕ ಪ್ರಕಾಶನದಿಂದ ಹೊರಬರುತ್ತಿರುವ 3ನೇ ಕೃತಿ. 2006ರಲ್ಲಿ ಫಿಲ್ಮಿ ಡೈರೆಕ್ಟರಿ ಹೊರತಂದಿತ್ತು. ಅದು ಕನ್ನಡದಲ್ಲೇ ಮೊತ್ತಮೊದಲ ಪ್ರಯತ್ನವಾಗಿತ್ತು. ಇನ್ನು 2014ರಲ್ಲಿ ಟಚ್ ಸ್ಕ್ರೀನ್ ಕೃತಿಯನ್ನು ಪ್ರಕಟಿಸಿತ್ತು. ಅದು ಉದಯ ಮರಕಿಣಿಯವರ ಸಿನಿಮಾ ಲೇಖನಗಳ ಗುಚ್ಛ. ಆ ಕೃತಿಗೆ ರಾಜ್ಯ ಪ್ರಶಸ್ತಿಯ ಪುರಸ್ಕಾರ ಸಿಕ್ಕಿತ್ತು. ಈಗ `ನಾನು ಪಾರ್ವತಿ' ಕೃತಿ ಹೊರಬರುತ್ತಿದೆ. ಅಂದಹಾಗೆ ಪಾರ್ವತಮ್ಮ ರಾಜ್‍ಕುಮಾರ್, ಚಿತ್ರಲೋಕ ವೆಬ್‍ಸೈಟ್ ಉದ್ಘಾಟಿಸಿದ್ದವರು. ಫಿಲಂ ಡೈರೆಕ್ಟರಿ ಕೃತಿಯನ್ನು ಬಿಡುಗಡೆ ಮಾಡಿದ್ದವರು. ಚಿತ್ರಲೋಕ ವೀರೇಶ್ ಅವರ ಫೋಟೋ ಎಕ್ಸಿಬಿಷನ್‍ಗೆ ಚಾಲನೆ ಕೊಟ್ಟಿದ್ದವರು. ಚಿತ್ರಲೋಕದ ಹಲವು ಮಹತ್ವದ ಮೈಲುಗಲ್ಲುಗಳಿಗೆ ಸಾಕ್ಷಿಯಾಗಿದ್ದವರು. ಈಗ ಅವರದ್ದೇ ಜೀವನದ ಕೃತಿ, ಚಿತ್ರಲೋಕ ಪ್ರಕಾಶನದಿಂದಲೇ ಹೊರಬರುತ್ತಿರುವುದು ವಿಶೇಷ.

ಇಂದು ಸಂಜೆ 5 ಗಂಟೆಗೆ ಪುಸ್ತಕ ಬಿಡುಗಡೆಯಾಗುತ್ತಿದೆ. ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಳ್ಳುತ್ತಿದ್ದಾರೆ. ಶಿವರಾಜ್ ಕುಮಾರ್, ಸುದೀಪ್, ರಾಘವೇಂದ್ರ ರಾಜ್‍ಕುಮಾರ್, ಜಯಮಾಲಾ ಹಾಗೂ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಸಂಪಾದಕ ರವಿ ಹೆಗಡೆ ಮುಖ್ಯ ಅತಿಥಿಗಳು. 

ಒಂದು ಅದ್ಭುತ ಪುಸ್ತಕ ನಿಮಗಾಗಿ ಕಾದಿದೆ. ಅದು ನಿಮಗೆ ಸ್ಫೂರ್ತಿಯಾದರೆ, ಈ ಕೃತಿ ಸಾರ್ಥಕವಾದಂತೆ.