ಹರಿಪ್ರಿಯಾ, ಈಗ ಕನ್ನಡದಲ್ಲಿ ಅತ್ಯಂತ ಬ್ಯುಸಿ ನಟಿ. ಅತ್ತ ಕುರುಕ್ಷೇತ್ರ, ಇತ್ತ ಸಂಹಾರ, ಇನ್ನೊಂದು ಸೂಜಿದಾರ, ಮತ್ತೊಂದು ಸೆಲ್ಫಿ.. ಹೀಗೆ ಹರಿಪ್ರಿಯಾ ಕೈತುಂಬಾ ಸಿನಿಮಾಗಳಿವೆ. ಇದರ ಮಧ್ಯೆ ಹರಿಪ್ರಿಯಾ ಸದ್ದಿಲ್ಲದೇ ಒಂದು ವಿಶೇಷ ದಾಖಲೆ ಬರೆದಿದ್ದಾರೆ.
ಸರ್ಜಾ ಫ್ಯಾಮಿಲಿಯ ಮೂವರು ಹೀರೋಗಳ ಜೊತೆ ಕಾಣಿಸಿಕೊಂಡಿರುವ ಹೊಸ ದಾಖಲೆ ಈಗ ಹರಿಪ್ರಿಯಾ ಹೆಸರಿಗೆ ಹೋಗಿದೆ. ಕುರುಕ್ಷೇತ್ರ ಚಿತ್ರದಲ್ಲಿ ಅರ್ಜುನ್ ಸರ್ಜಾ ಜೊತೆ ನಟಿಸಿರುವ ಹರಿಪ್ರಿಯಾ, ಭರ್ಜರಿಯಲ್ಲಿ ಧ್ರುವ ಸರ್ಜಾಗೆ ನಾಯಕಿಯಾಗಿದ್ದರು. ಈಗ ಸಂಹಾರ ಚಿತ್ರದಲ್ಲಿ ಧ್ರುವ ಅಣ್ಣ ಚಿರಂಜೀವಿ ಸರ್ಜಾಗೆ ನಾಯಕಿ.
ಸಂಹಾರ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಇದೇ ಮೊದಲ ಬಾರಿಗೆ ಅಂಧನ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಹೀರೋಗಳು ಅಂಧನ ಪಾತ್ರದಲ್ಲಿ ನಟಿಸಿಯೇ ಇಲ್ಲ ಎನ್ನುವಷ್ಟು ಅಪರೂಪ. ಅಂತಹ ಚಿತ್ರದಲ್ಲಿ ಇಡೀ ಸಿನಿಮಾಗೆ ಟ್ವಿಸ್ಟ್ ಕೊಡುವ ಎರಡು ಶೇಡ್‍ಗಳಿರುವ ಪಾತ್ರದಲ್ಲಿ ನಟಿಸಿದ್ದಾರಂತೆ ಹರಿಪ್ರಿಯಾ.
ಕ್ಯಾರೆಕ್ಟರ್ ಹೆಂಗೆ ಅಂದ್ರೆ, ಡೈರೆಕ್ಟರ್ ಹೇಳಿದ್ದಾರೆ. ಹೇಳೋ ಹಾಗಿಲ್ಲ ಅಂತಾ ನಿರ್ದೇಶಕ ಗುರು ದೇಶಪಾಂಡೆ ಕಡೆ ಕೈತೋರಿಸ್ತಾರೆ ಹರಿಪ್ರಿಯಾ.