ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ರಿಲೀಸ್ ಆಗಿರುವ ಚಿತ್ರಗಳ ಸಂಖ್ಯೆ ಏನಿಲ್ಲವೆಂದರೂ 50ರ ಸಮೀಪದಲ್ಲಿದೆ. ರಿಲೀಸ್ ಆದ ಚಿತ್ರಗಳೇನು ಒಂದಾ.. ಎರಡಾ.. ಹೀಗೆ ಬೆನ್ನು ಬೆನ್ನಿಗೆ ಚಿತ್ರಗಳು ರಿಲೀಸ್ ಆದಾಗ, ಹೊಸ ಹೊಸ ಚಿತ್ರಗಳ ನಿರ್ಮಾಪಕರು, ನಮಗೆ ಥಿಯೇಟರುಗಳೇ ಇಲ್ಲ ಎಂದು ಪರದಾಡಬೇಕಿತ್ತು. ಹೋರಾಟ ನಡೆಯಬೇಕಿತ್ತು. ಆದರೆ, ಇದಾವುದೂ ಆಗುತ್ತಿಲ್ಲ. ಬದಲಿಗೆ ಥಿಯೇಟರುಗಳವರು ಹಳೆಯ ಚಿತ್ರಗಳನ್ನು ರಿಲೀಸ್ ಮಾಡುತ್ತಿದ್ದಾರೆ.
ಹೌದು, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಥಿಯೇಟರ್‍ನವರು ರಾಜಕುಮಾರ, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ತಿಥಿ, ರಂಗಿತರಂಗ ಚಿತ್ರಗಳನ್ನು ಹಾಕಲು ಶುರು ಮಾಡಿದ್ದಾರೆ. ಕಾರಣ ಇಷ್ಟೆ, ಲೆಕ್ಕಕ್ಕೇ ಸಿಗದಷ್ಟು ಸಿನಿಮಾ ರಿಲೀಸ್ ಆಗಿದ್ದರೂ, ಯಾವ ಚಿತ್ರಗಳೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗುತ್ತಿವೆ. ಹೀಗಾಗಿ ಎಷ್ಟೋ ಚಿತ್ರಮಂದಿರಗಳಲ್ಲಿ ಹೊಸ ಸಿನಿಮಾಗಳನ್ನು ಎರಡು, ಮೂರನೇ ದಿನಕ್ಕೆ ಎತ್ತಂಗಡಿ ಮಾಡಲಾಗುತ್ತಿದೆ. ಪ್ರೇಕ್ಷಕರನ್ನು ಮತ್ತೆ ಥಿಯೇಟರಿನತ್ತ ಕರೆತರಲು ಚಿತ್ರಮಂದಿರಗಳ ಮಾಲೀಕರು ಈಗ ಹಳೆಯ ಚಿತ್ರಗಳ ಮೊರೆ ಹೋಗುತ್ತಿದ್ದಾರೆ.