ಅತಿರಥ, ಇದೇ ವಾರ ಬಿಡುಗಡೆಯಾಗಿರುವ ಚಿತ್ರ. ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿರುವ ಚಿತ್ರಕ್ಕೆ ಈಗ ಸಂಕಟ ತಂದಿರುವುದು ಚಿತ್ರದ ನಾಯಕ ಚೇತನ್ ಹೇಳಿರುವ ಮಾತು. ಇತ್ತೀಚೆಗೆ ನಟ ಚೇತನ್, ಹಲವು ವೇದಿಕೆಗಳಲ್ಲಿ ಹಿಂದೂ ಸಂಘಟನೆಗಳ ವಿರುದ್ಧ ಮಾತನಾಡಿದ್ದರು. ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಚಾರದಲ್ಲಿ ಚೇತನ್ ಹಿಂದೂ ಸಂಘಟನೆಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಅದು ಈಗ ಚಿತ್ರಕ್ಕೆ ಅಡ್ಡಿಯಾಗುತ್ತಿದೆ. ಚಾಮರಾಜ ನಗರದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ನಡೆಸಿದ್ದಾರೆ. ಪ್ರದರ್ಶನಕ್ಕೂ ಅಡ್ಡಿ ಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಚೇತನ್, ನಾನು ಹಿಂಸೆಯ ವಿರೋಧಿಯೇ ಹೊರತು, ಹಿಂದೂ ವಿರೋಧಿ ಅಲ್ಲ. ಅಭಿಪ್ರಾಯ ಭೇದವಿದ್ದರೆ, ಬನ್ನಿ, ಮಾತನಾಡಿ ಬಗೆಹರಿಸಿಕೊಳ್ಳೋಣ. ದಯವಿಟ್ಟು ಚಿತ್ರಕ್ಕೆ ಅಡ್ಡಿ ಮಾಡಬೇಡಿ ಎಂದು ವಿನಂತಿಸಿಕೊಂಡಿದ್ದಾರೆ.
ಚಿತ್ರದ ನಿರ್ದೇಶಕ ಮಹೇಶ್ ಬಾಬು ಕೂಡಾ ಚಿತ್ರಕ್ಕೆ ತೊಂದರೆ ಮಾಡಬೇಡಿ ಎಂದು ವಿನಂತಿಸಿಕೊಂಡಿದ್ದಾರೆ. ನನಗೆ ಗೊತ್ತಿರುವ ಹಾಗೆ, ಚೇತನ್ ಹಿಂದೂ ವಿರೋಧಿಯಲ್ಲ. ಇಷ್ಟಕ್ಕೂ ಚಿತ್ರದಲ್ಲಿ ಚೇತನ್ ಒಬ್ಬ ನಟರಷ್ಟೆ. ಇಡೀ ಸಿನಿಮಾ ನಿರ್ದೇಶಕರ ಕೂಸು. ಇದರಿಂದ ಹಲವರಿಗೆ ತೊಂದರೆಯಾಗುತ್ತದೆ. ದಯವಿಟ್ಟು ಮಾತನಾಡಿ ವಿಚಾರ ಬಗೆಹರಿಸಿಕೊಳ್ಳೋಣ ಎಂದಿದ್ದಾರೆ.
ಆದರೆ, ಈಗಾಗಲೇ ಚಾಮರಾಜ ನಗರದಲ್ಲಿ ಪ್ಯಾರಡೈಸ್ ಚಿತ್ರಮಂದಿರದಿಂದ ಚಿತ್ರವನ್ನು ತೆಗೆಯಲಾಗಿದೆ. ಚೇತನ್ ಅವರ ಹೋರಾಟದ ಮಾತು ಚಿತ್ರವನ್ನು ಕಾಡುತ್ತಿದೆ.
Related Articles :-