ಶಿವರಾಜ್ ಕುಮಾರ್ ಸುಮಾರು 15 ವರ್ಷಗಳ ನಂತರ ರೀಮೇಕ್ ಸಿನಿಮಾದಲ್ಲಿ ನಟಿಸುತ್ತಿರುವುದು ಗೊತ್ತಿದೆಯಲ್ಲ. ಅದು ಒಪ್ಪಂ ಚಿತ್ರದ ರೀಮೇಕ್. ಮೂಲ ಚಿತ್ರದಲ್ಲಿ ನಟಿಸಿದ್ದವರು ಮೋಹನ್ ಲಾಲ್.
ಅಂಧನೊಬ್ಬ ತನ್ನ ಕುಟುಂಬ ರಕ್ಷಿಸಿಕೊಳ್ಳಲು ಹೋರಾಡುವ ಪಾತ್ರದಲ್ಲಿ ಮೋಹನ್ ಲಾಲ್ ಮನೋಜ್ಞವಾಗಿ ನಟಿಸಿದ್ದರು. ಆ ಪಾತ್ರ ನಿರ್ವಹಿಸುತ್ತಿರುವ ಶಿವರಾಜ್ ಕುಮಾರ್, ಪಾತ್ರಕ್ಕೆ ನ್ಯಾಯ ಒದಗಿಸಲು ಶ್ರಮಿಸುತ್ತೇನೆ. ಮೋಹನ್ ಲಾಲ್ ಮಟ್ಟಕ್ಕೆ ನಟಿಸುತ್ತೇನೋ ಇಲ್ಲವೋ ಗೊತ್ತಿಲ್ಲ. ಶೇ.60ರಷ್ಟಾದರೂ ನ್ಯಾಯ ಒದಗಿಸುತ್ತೇನೆ ಎಂದಿದ್ದಾರೆ.
ಶಿವರಾಜ್ ಕುಮಾರ್‍ಗೆ ಅಂಧನ ಪಾತ್ರ ಇದೇ ಮೊದಲು. ಮ್ಯಾನರಿಸಂ ಬದಲಾಯಿಸುವ ಸವಾಲು ಕೂಡಾ ಇದೆ. ರೀಮೇಕ್ ಮಾಡಲ್ಲ ಎನ್ನುವ ಪ್ರತಿಜ್ಞೆ ಮುರಿಯುವುದಕ್ಕೆ ಕಾರಣ, ಚಿತ್ರದ ಕಥೆ ಹಾಗೂ ಪಾತ್ರ. ರೀಮೇಕ್ ಒಪ್ಪುತ್ತಿದ್ದೇನೆ ಎಂದು ಕಮರ್ಷಿಯಲ್ ಚಿತ್ರಗಳನ್ನು ಮಾಡಲು ಒತ್ತಡ ಬಂದರೆ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಶಿವರಾಜ್ ಕುಮಾರ್.
ಕಥೆ, ಪಾತ್ರ ಇಷ್ಟವಾಗಬೇಕು. ಅದು ಮೊದಲು ಮನಸ್ಸಿಗೆ ಹತ್ತಿರವಾಗಬೇಕು. ಆ ಪಾತ್ರವನ್ನು ಮಾಡಲೇಬೇಕು ಎಂಬ ತುಡಿತ ಹೊರಹೊಮ್ಮಬೇಕು. ಅಂಥ ಚಿತ್ರಗಳಾದರೆ ರೀಮೇಕ್ ಮಾಡುತ್ತೇನೆ ಎಂದಿದ್ದಾರೆ ಶಿವರಾಜ್ ಕುಮಾರ್.