ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ. ಆ ಸಮ್ಮೇಳನದಲ್ಲಿ ಏನೇನೆಲ್ಲ ಇದೆಯೆಂದರೆ ಸಾಹಿತ್ಯಕ್ಕೆ ಬೇಕಾದದ್ದು, ಬೇಡವಾದದ್ದು, ಊಟ, ಕೂಲ್‍ಡ್ರಿಂಕ್ಸು, ಬ್ಯುಸಿನೆಸ್ಸು, ರಾಜಕೀಯ ಹಾಗೂ ಹೊಲಸು ರಾಜಕೀಯ.. ಎಲ್ಲಕ್ಕೂ ಜಾಗವಿದೆ. ಆದರೆ, ಸಿನಿಮಾಗೆ ಮಾತ್ರ ಇಲ್ಲ.
ಅದೇಕೋ ಏನೋ.. ಸಾಹಿತ್ಯ ಕ್ಷೇತ್ರದಲ್ಲಿರುವವರಿಗೆ ಸಿನಿಮಾ ಮಂದಿಯ ಬಗ್ಗೆ ಒಂದು ಮನೋಭಾವವಿದೆ. ನೀವು ದೊಡ್ಡ ದೊಡ್ಡ ಸಾಹಿತಿಗಳನ್ನು ಮಾತನಾಡಿಸಿ ನೋಡಿ... ಅವರು ಕನ್ನಡ ಸಿನಿಮಾಗಳನ್ನು ನೋಡದೆ ವರ್ಷಗಳೇ ಕಳೆದುಹೋಗಿವೆ. ನಾನ್ ಕನ್ನಡ ಸಿನಿಮಾ ನೋಡಲ್ಲ ಅನ್ನೋದು ಅವರಿಗೆ ಹೆಮ್ಮೆಯ ವಿಷಯವಾಗಿದೆ. ಆದರೆ, ನೆನಪಿರಲಿ.. ಅವರು ಕನ್ನಡದ ಸಾಹಿತಿಗಳು.
ಇನ್ನೂ ಕೆಲವರಿದ್ದಾರೆ, ಅವರಿಗೆ ಸಿನಿಮಾ ಎಂದರೆ ಇಂದಿಗೂ ರಾಜ್‍ಕುಮಾರ್ ಮಾತ್ರ. ಬಹುಶಃ, ರಾಜ್‍ಕುಮಾರ್ ಇವರ ಟೀಕೆಗೂ ನಿಲುಕದಷ್ಟು ಎತ್ತರಕ್ಕೆ ಬೆಳೆಯದೇ ಹೋಗಿದ್ದರೆ, ಅವರನ್ನೂ ಒಪ್ಪುತ್ತಿರಲಿಲ್ಲವೇನೋ. ಅಂಥಹವರಿಗೆ ಈಗಿನ ಹೊಸ ಹುಡುಗರ ವಿಭಿನ್ನ ಪ್ರಯತ್ನಗಳ ಗಾಳಿ ಗಂಧವೇ ಗೊತ್ತಿಲ್ಲ.
ಈ ಸಾಹಿತಿಗಳಿಗೆ ಅತ್ತ ಕಮರ್ಷಿಯಲ್ ಸಿನಿಮಾಗಳನ್ನು ನೋಡುವುದೆಂದರೆ ಅವಮಾನ, ವಿಭಿನ್ನ ಪ್ರಯತ್ನಗಳನ್ನು ತಿಳಿದುಕೊಳ್ಳೋದಕ್ಕೆ ಅಜ್ಞಾನ. ಇವರು ಸಿನಿಮಾವನ್ನು ಸಾಹಿತ್ಯ ಎಂದು ಒಪ್ಪಿಕೊಂಡರಾದರೂ ಹೇಗೆ..?
ಜಾನಪದ, ಪುರಾಣ, ಆಡುಭಾಷೆ, ಸಂಸ್ಕøತ, ವೇದಾಂತ, ತುಂಟತನ, ಒಗಟು, ಗಾದೆ.. ಹೀಗೆ ಪ್ರತಿಯೊಂದನ್ನೂ ಪ್ರಯೋಗ ಮಾಡಿರುವ, ಪ್ರಯೋಗಿಸಿ ಗೆದ್ದಿರುವ ಹಂಸಲೇಖರಂಥಹವರನ್ನೇ ಸಾಹಿತಿ ಎಂದು ಒಪ್ಪಿಕೊಳ್ಳಲ್ಲ. ಇನ್ನು ಹೊಸ ಹುಡುಗರು ಗೊತ್ತಾಗುವುದಾದರೂ ಹೇಗೆ..? ಸಾಹಿತ್ಯ ಪ್ರಕಾರಕ್ಕಿಂತ ಅತಿ ದೊಡ್ಡ ವರ್ಗವೊಂದು ಸಿನಿಮಾ ನೋಡುತ್ತಿದೆ. ಅವರನ್ನು ಸಾಹಿತ್ಯದತ್ತ ಸೆಳೆಯುವ ಅವಕಾಶವನ್ನು ಪ್ರತಿ ವರ್ಷವೂ ಸಾಹಿತ್ಯ ಸಮ್ಮೇಳನ ಮಿಸ್ ಮಾಡಿಕೊಳ್ಳುತ್ತಲೇ ಇದೆ. ಸಾಹಿತ್ಯವೆಂದರೆ ಪುಸ್ತಕವಷ್ಟೇ ಎನ್ನುವ ಕಲ್ಪನೆಯೂ ಓಡಿಹೋಗುತ್ತಿರುವ ಈ ಕಾಲದಲ್ಲಿ ಸಿನಿಮಾ, ಸಾಮಾಜಿಕ ತಾಣ, ಸಾಫ್ಟ್‍ವೇರ್‍ನಂತಹ ಸಮಕಾಲೀನ ಬದಲಾವಣೆಗಳನ್ನೂ ತೆಕ್ಕೆಗೆ ತೆಗೆದುಕೊಳ್ಳಬೇಕು.
ಹಾಗೆ ನೋಡಿದರೆ, ಸಿನಿಮಾ ರಂಗದ ಕುರಿತೇ ಚರ್ಚೆ ನಡೆಸಲು ಎಂಥೆಂತಹ ಸಮಸ್ಯೆಗಳಿದ್ದವು. ಡಬ್ಬಿಂಗ್, ರೀಮೇಕ್, ಸಿನಿಮಾ ಮಾರ್ಕೆಟಿಂಗ್, ಪರಭಾಷಾ ಚಿತ್ರಗಳ ಹಾವಳಿಯಂತಹ ವಿಚಾರಗಳಿದ್ದವು. (ಸಮಸ್ಯೆಗಳನ್ನಷ್ಟೇ ಚರ್ಚೆ ಮಾಡಬೇಕು ಎನ್ನುವುದು ಸಾಹಿತ್ಯ ಸಮ್ಮೇಳನದ ಅಲಿಖಿತ ನಿಯಮ). ಸಾಧನೆಯ ಬಗ್ಗೆ ಮಾತನಾಡೋಕೆ ರಾಜಕುಮಾರ, ಕಿರಿಕ್ ಪಾರ್ಟಿ ಸೇರಿದಂತೆ ಹಲವು ಕಮರ್ಷಿಯಲ್ ಚಿತ್ರಗಳಿದ್ದವು. ತಿಥಿ, ಗೋಧಿ ಬಣ್ಣ, ರಾಮಾ ರಾಮಾ ರೇ.. ಒಂದಾ ಎರಡಾ.. ವಿಶೇಷವೆಂದರೆ, ಇವೆಲ್ಲ ಹೊಸ ಬರಹಗಾರರ, ಹೊಸ ಪ್ರತಿಭೆಗಳ ಸೃಷ್ಟಿ.
ದುರಂತವಿರುವುದು ಇಲ್ಲೇ. ಈ ಸಾಹಿತ್ಯ ಸಮ್ಮೇಳನ ನಡೆಸುವವರಿಗೆ ರಾಜ್‍ಕುಮಾರ್ ನಂತರದ ಬಹುತೆಕ ಕಲಾವಿದರ ಸಿನಿಮಾಗಳ ಬಗ್ಗೆ ಗೊತ್ತಿಲ್ಲ. ಪುಟ್ಟಣ್ಣ ಕಣಗಾಲ್ ನಂತರದ ನಿರ್ದೇಶಕರೂ ಗೊತ್ತಿಲ್ಲ. ಬರಹಗಾರರ ಬಗ್ಗೆ ಗೊತ್ತಿಲ್ಲ. ಗೀತ ಸಾಹಿತಿಗಳ ಬಗ್ಗೆ ಗೊತ್ತಿಲ್ಲ. ಸಿನಿಮಾ, ಸೀರಿಯಲ್‍ಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುವುದು ಇವರ ಪ್ರಕಾರ ಸಾಹಿತ್ಯವೇ ಅಲ್ಲ.
ಆದರೂ, ಸಿನಿಮಾಗಳಲ್ಲಿ ಮಾತ್ರ ಕನ್ನಡವೇ ನಮ್ಮಮ್ಮ ಎಂದು ಹಾಡುತ್ತಾರೆ. ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು ಎಂದು ಕುಣಿಯುತ್ತಾರೆ. ಕನ್ನಡ ಹೊನ್ನುಡಿ ದೇವಿಯನ್ನು ಪೂಜಿಸಿ ಆರಾಧಿಸುತ್ತಾರೆ. ಕನ್ನಡದ ಕವಿಗಳ ಹಾಡುಗಳನ್ನು ತಮ್ಮ ಚಿತ್ರದಲ್ಲಿ ಹಾಕಿಕೊಂಡು ಸಂಭ್ರಮಿಸುತ್ತಾರೆ. ಇಷ್ಟೆಲ್ಲ ಮಾಡಿಯೂ.. ಕನ್ನಡದ ಒಂದು ದೊಡ್ಡ ಹಬ್ಬದಲ್ಲಿ ನಮಗೆ ಆಹ್ವಾನವೇ ಇಲ್ಲವಲ್ಲ, ನಾವು ಯಾರೂ ಅಲ್ಲವೇ, ಏನೇನೂ ಅಲ್ಲವೇ ಎಂದು ಅನಿಸಿದಾಗ ಬೇಸರಿಸಿಕೊಳ್ಳುತ್ತಾರೆ.
ಇದೊಂಥರಾ ಪಂಚಮಿ ಹಬ್ಬಕ್ಕೆ ಅಣ್ಣ ಕರೆಯುತ್ತಾನೆ ಎಂದು ಕಾಯುತ್ತಾ ಕೂರುವ ತಂಗಿಯಂತೆ. ಅಣ್ಣ ಬರುತ್ತಾನೋ.. ಬಾರನೋ.. ತಂಗಿ ಕಾಯುತ್ತಲೇ ಇರುತ್ತಾಳೆ. ಅಣ್ಣನನ್ನು ಬಿಟ್ಟು ಅವಳಿಗಾದರೂ ಬೇರೆ ಯಾರಿದ್ದಾರೆ..?