ಧ್ರುವ ಸರ್ಜಾ, ಸತತ ಹ್ಯಾಟ್ರಿಕ್ ಸಂಭ್ರಮದ ಅಲೆಯಲ್ಲಿ ತೇಲುತ್ತಿದ್ದಾರೆ. ಒಂದರ ಹಿಂದೊಂದು ಹಿಟ್ ಕೊಟ್ಟ ಧ್ರುವಾ ಅವರ 4ನೇ ಚಿತ್ರ ಪೊಗರು ಮೇಲೆ ಭರ್ಜರಿ ನಿರೀಕ್ಷೆಗಳಿವೆ. ಚಿತ್ರಕ್ಕೆ ಮೊದಲು ಶೃತಿ ಹಾಸನ್ ನಾಯಕಿ ಎನ್ನಲಾಗಿತ್ತು. ನಂತರ ಶೃತಿ ಹಾಸನ್ ನಿರಾಕರಿಸಿದ್ದು, ಕನ್ನಡ ಚಿತ್ರಾಭಿಮಾನಿಗಳಿಂದ ಟ್ರೋಲ್ ಆಗಿದ್ದು ಹಳೆಯ ಸುದ್ದಿ.
ಈಗ ಧ್ರುವ ಸರ್ಜಾಗೆ ನಾಯಕಿ ಯಾರು ಎಂಬ ಪ್ರಶ್ನೆ ಉದ್ಭವವಾಗಿದೆ. ಧ್ರುವ ಸರ್ಜಾ ಅವರೇ ಕನ್ನಡದ ಹುಡುಗಿಯನ್ನೇ ಹಾಕಿಕೊಳ್ಳೋಕೆ ಸಲಹೆ ಕೊಟ್ಟಿದ್ದಾರಂತೆ. ಏಕೆಂದರೆ, ಅವರ ಮೂರು ಚಿತ್ರಗಳಲ್ಲಿ ನಾಯಕಿಯಾಗಿದ್ದವರು ಕನ್ನಡತಿಯರು. ಹೀಗಾಗಿ ಚಿತ್ರತಂಡದ ಮುಂದೆ ಈಗ ಮೂರು ಆಯ್ಕೆಗಳಿವೆ. ಕಿರಿಕ್ ಪಾರ್ಟಿಯ ರಶ್ಮಿಕಾ ಮಂದಣ್ಣ, ಅತಿರಥನ ಅರಗಿಣಿ ಲತಾ ಹೆಗಡೆ ಹಾಗೂ ಶಾನ್ವಿ ಶ್ರೀವಾಸ್ತವ್.
ಸದ್ಯಕ್ಕೆ ಯಾರೂ ಫೈನಲ್ ಆಗಿಲ್ಲ. ರಶ್ಮಿಕಾ ಮಂದಣ್ಣ ಅವರ ಹೆಸರು ಮುಂಚೂಣಿಯಲ್ಲಿದೆ. ಒಟ್ಟಿನಲ್ಲಿ ಧ್ರುವ ಸರ್ಜಾ ಅವರ ಚಿತ್ರದ ಒಂದೊಂದು ಸುದ್ದಿಯೂ ಸಂಚಲನ ಸೃಷ್ಟಿಸುತ್ತಿದೆ.