ಉಪ್ಪು ಹುಳಿ ಖಾರ.. ಇದೇ ವಾರ ರಿಲೀಸ್ ಆಗುತ್ತಿರುವ ಚಿತ್ರ. ಚಿತ್ರದ ಹಾಡುಗಳು ವೈರಲ್ ಆಗಿದ್ದು, ಚಿತ್ರದ ಬಗ್ಗೆ ನಿರೀಕ್ಷೆಯೂ ಹೆಚ್ಚಿದೆ. ಅದಕ್ಕೆ ಕಾರಣ ಚಿತ್ರದ ಟೈಟಲ್. ಅಡುಗೆ ಮಾಡಬೇಕು ಅಂದ್ರೆ, ಉಪ್ಪು ಹುಳಿ ಖಾರ ಸರಿಯಾಗಿರಬೇಕು ಅಂತೀವಿ. ಸಿನಿಮಾದಲ್ಲೂ ಹಾಗೆಯೇ. ಎಲ್ಲವೂ ಹದವಾಗಿ ಬೆರೆತಿರಬೇಕು.
ಉಪ್ಪು ಹುಳಿ ಖಾರದ ಥೀಮೇ ಹಾಗಿದೆಯಂತೆ. ಈ ಸಮಾಜ ಮೊದಲು ಬದಲಾಗಬೇಕು ಎನ್ನುವ ಒಂದು ಗುಂಪು, ಹೀಗೇ ಇರಲಿ ಬಿಡಿ, ಎಲ್ಲವೂ ಚೆನ್ನಾಗಿದೆ ಎನ್ನುವ ಇನ್ನೊಂದು ಗುಂಪು ಜೊತೆಗೆ ಹೇಗಿದ್ದರೂ ನಡೆಯುತ್ತೆ ಎನ್ನುವ ಮತ್ತೊಂದು ಗುಂಪು. ಇಡೀ ಚಿತ್ರದಲ್ಲಿ ಎದ್ದು ಕಾಣುವುದು ಇಂಥ ಮೂವರ ಮನಸ್ಥಿತಿ. ಅದನ್ನೇ ಚಿತ್ರದಲ್ಲಿ ಕಾಮಿಡಿ ರೂಪದಲ್ಲಿ ಹೇಳಲಾಗಿದೆ. ತಮ್ಮ ಕಲ್ಪನೆಯೆಲ್ಲವನ್ನೂ ಕಲಾವಿದರು ಅಚ್ಚುಕಟ್ಟಾಗಿ ತೆರೆಗೆ ತಂದಿದ್ದಾರೆ ಎಂದಿದ್ದಾರೆ ನಿರ್ದೇಶಕ ಇಮ್ರಾನ್ ಸರ್ದಾರಿಯಾ.
ಕನ್ನಡ ಕಿರುತೆರೆಯ ನಂ.1 ಆ್ಯಂಕರ್ ಅನುಶ್ರೀ, ಚಿತ್ರದಲ್ಲಿಯೂ ಆ್ಯಂಕರ್ ಪಾತ್ರವನ್ನೇ ಮಾಡಿದ್ದಾರೆ. ಅನುಶ್ರೀ ಅವರದ್ದು ಬಿಂದಾಸ್ ಡೈಲಾಗ್ ಪಾತ್ರ. ಕಾವ್ಯಾತ್ಮಕವಾಗಿ ಮಾತನಾಡುವ ಶೈಲಿ. ಟಿವಿ ಸ್ಕ್ರೀನ್‍ಗೂ, ಬೆಳ್ಳಿತೆರೆಗೂ ಡಿಫರೆನ್ಸ್ ಲುಕ್ ಇದೆ ಎಂದಿದ್ದಾರೆ.