ಪದ್ಮಾವತಿ ಚಿತ್ರ ಈಗ ರಾಷ್ಟ್ರಾದ್ಯಂತ ಬಿಸಿ ಬಿಸಿ ಸುದ್ದಿ. ರಜಪೂತ ಸಂಘಟನೆಯವರಂತೂ ಬನ್ಸಾಲಿ, ದೀಪಿಕಾ ತಡೆಗೆ 10 ಕೋಟಿ ಬಹುಮಾನ ಘೋಷಿಸಿದ್ದಾರೆ. ಪಂಜಾಬ್‍ನಲ್ಲಂತೂ ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷರೇ ಬೀದಿಗಿಳಿದು ಅಬ್ಬರಿಸಿದ್ದಾರೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಶಹಬ್ಬಾಸ್‍ಗಿರಿ ಸಿಕ್ಕಿದೆ. ಕೆಲವು ರಾಷ್ಟ್ರೀಯ ಸುದ್ದಿವಾಹಿನಿಗಳ ಸಂಪಾದಕರಿಗೆ ಚಿತ್ರದ ವಿಶೇಷ ಪ್ರದರ್ಶನವೂ ಆಗಿದೆ. ಅವರೂ ಕೂಡಾ ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡಿದ್ದಾರೆ. ಚಿತ್ರವನ್ನು ವಿರೋಧಿಸುವ ರಜಪೂತರ ವಾದದಲ್ಲಿ ಅರ್ಥವೇ ಇಲ್ಲ ಎಂದಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಸುಪ್ರೀಂಕೋರ್ಟ್ ಕೂಡಾ ಯಾವುದೇ ನಿಷೇಧ ಹೇರುವ ಅಥವಾ ಚಿತ್ರವನ್ನು ಪ್ರಶ್ನಿಸುವ ಪ್ರಕ್ರಿಯೆಯಿಂದ ದೂರವೇ ಉಳಿದಿದೆ. ಅದು ನ್ಯಾಯಾಲಯದ ಕೆಲಸವಲ್ಲ ಎನ್ನುವ ಮೂಲಕ, ಅದು ತನ್ನ ಸಂದೇಶವನ್ನು ಸ್ಪಷ್ಟವಾಗಿ ಸಾರಿದೆ.
ಸ್ಯಾಂಡಲ್‍ವುಡ್‍ನಲ್ಲಿಯೂ ಚಿತ್ರದ ಬಗ್ಗೆ, ಅದರಲ್ಲಿಯೂ ಕನ್ನಡತಿ ದೀಪಿಕಾ ಪಡುಕೋಣೆಯ ಬಗ್ಗೆ ಬೆಂಬಲ ವ್ಯಕ್ತವಾಗುತ್ತಿದೆ. ರಾಗಿಣಿ, ಶ್ರದ್ಧಾ ಶ್ರೀನಾಥ್, ಮಾನ್ವಿತಾ ಹರೀಶ್, ಪ್ರಿಯಾಮಣಿ, ಗಣೇಶ್, ಪ್ರಕಾಶ್ ರೈ ಮೊದಲಾದವರು ಚಿತ್ರತಂಡದ ಬೆಂಬಲಕ್ಕೆ ನಿಂತಿದ್ದಾರೆ.
ಸಚಿವರಾದ ಡಿ.ಕೆ. ಶಿವಕುಮಾರ್ ಬಹಿರಂಗವಾಗಿ ಟ್ವೀಟ್ ಮಾಡಿ ಬೆಂಬಲಿಸಿದ್ದರೆ, ಅದನ್ನು ರೀ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಕೂಡಾ ಚಿತ್ರತಂಡದ ಬೆಂಬಲಕ್ಕೆ ನಿಂತಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಚಿತ್ರದ ಪ್ರದರ್ಶನಕ್ಕೆ ಅಡ್ಡಿ ಪಡಿಸಿದರೆ, ಕಾನೂನು ಭಂಗಕ್ಕೆ ಯತ್ನಿಸಿದರೆ ಗಂಭೀರ ಕ್ರಮ ತೆಗೆದುಕೊಳ್ಳುವುದಾಗಿ ಸುತ್ತೋಲೆಯನ್ನೇ ಹೊರಡಿಸಿದ್ದಾರೆ.
ಚಿತ್ರ ರಿಲೀಸ್ ಆಗಲಿರುವುದು ಜನವರಿಯಲ್ಲಿ. ಅಷ್ಟು ಹೊತ್ತಿಗೆ ಇನ್ನೂ ಏನೇನಾಗಲಿದೆಯೋ.. ಏನೋ..
Related Articles :-