ರಾಮಾ ರಾಮಾ ರೇ ಎಂಬ ಕ್ಲಾಸಿಕ್ ಚಿತ್ರದ ಮೂಲಕ, ಪ್ರೇಕ್ಷಕರ ಮನಸು ಗೆದ್ದ ನಿರ್ದೇಶಕ ಸತ್ಯಪ್ರಕಾಶ್, ಹೊಸ ಸಿನಿಮಾಗೆ ರೆಡಿಯಾಗಿದ್ದಾರೆ. ಅವರಿಗೆ ಜೊತೆಯಾಗಿರುವುದು ಹೆಬ್ಬುಲಿ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ. ಕ್ಲಾಸ್ ಚಿತ್ರದ ನಿರ್ದೇಶಕ ಹಾಗೂ ಮಾಸ್ ಚಿತ್ರದ ನಿರ್ಮಾಪಕ ಇಬ್ಬರೂ ಸೇರಿ ಮಾಡಲು ಹೊರಟಿರುವ ಸಿನಿಮಾದ ಕಥೆ, ಮಲೆನಾಡಿನದ್ದು. ಆ ಚಿತ್ರಕ್ಕೆ ಸತ್ಯಪ್ರಕಾಶ್‍ಗೆ 10 ವರ್ಷದ ಬಾಲಕ ಬೇಕಂತೆ.
ಅಂತಹ ಹುಡುಗನಿಗಾಗಿ ಹುಡುಕಾಟ ಶುರು ಮಾಡಿದ್ದಾರೆ ಸತ್ಯಪ್ರಕಾಶ್. ಅದರಲ್ಲೂ ವಿಶೇಷವಾಗಿ ಸರ್ಕಾರಿ ಶಾಲೆಗಳಲ್ಲೇ ಹುಡುಕುತ್ತಿದ್ದಾರಂತೆ. ಬಹುತೇಕ ಹೊಸಬರನ್ನೇ ಹಾಕಿಕೊಂಡು ಸಿನಿಮಾ ಮಾಡಲು ನಿರ್ಧರಿಸಿರುವ ಸತ್ಯಪ್ರಕಾಶ್, ಚಿತ್ರ ಜನವರಿಯಲ್ಲಿ ಶುರುವಾಗಬಹುದು ಎಂದಿದ್ದಾರೆ. ಚಿತ್ರದ ಟೈಟಲ್ ಇದೇ ವಾರ ಫೈನಲ್ ಆಗಲಿದೆಯಂತೆ.