`ಕನಕ'. ಆರ್. ಚಂದ್ರು ನಿರ್ಮಾಣ ಮತ್ತು ನಿರ್ದೇಶನದ, ದುನಿಯಾ ವಿಜಿ ಅಭಿನಯದ ಚಿತ್ರ ತೆರೆಗೆ ಬರೋಕೆ ಸಿದ್ಧವಾಗಿದೆ. ರಾಜ್ಯೋತ್ಸವಕ್ಕೆ ಅದ್ಧೂರಿ ಟ್ರೇಲರ್‍ನ್ನು ಉಡುಗೊರೆಯಾಗಿ ಕೊಟ್ಟಿದ್ದರು ಆರ್.ಚಂದ್ರು. ಡಾ. ರಾಜ್ ಅಭಿಮಾನಿ ಹಾಗೂ ಆಟೋ ಚಾಲಕನ ಪಾತ್ರದಲ್ಲಿರುವ ವಿಜಯ್ ಡೈಲಾಗ್ ಭಾರಿ ಸದ್ದು ಮಾಡಿತ್ತು. ಸಿನಿಮಾ ನೋಡಿದರೆ, ಚಪ್ಪಾಳೆ, ಶಿಳ್ಳೆ ಹೊಡೆಯುವಂತಹ ಸೀನ್‍ಗಳು ಹಲವಾರಿವೆ ಎನ್ನುವುದು ಚಂದ್ರು ಭರವಸೆ.
ಅಂದಹಾಗೆ ತಮ್ಮ ಚಿತ್ರವನ್ನು ಡಿ.1ಕ್ಕೆ ತೆರೆಗೆ ತರುವುದಾಗಿ ಘೋಷಿಸಿದ್ದಾರೆ ಚಂದ್ರು. ಅದೇ ದಿನ ಮಫ್ತಿ ರಿಲೀಸ್ ಆಗಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ, ಅದು ಇನ್ನೂ ಪಕ್ಕಾ ಆಗಿಲ್ಲ. ಮಫ್ತಿ ಕೂಡಾ ಅದೇ ದಿನ ಬಂದರೆ ಏನ್ ಮಾಡ್ತೀರಿ ಅನ್ನೋ ಪ್ರಶ್ನೆಗೆ ಚಂದ್ರು ಅಭಿಮಾನದ ಉತ್ತರ ಕೊಟ್ಟಿದ್ದಾರೆ.
ನಾನು ಶಿವಣ್ಣನ ಅಭಿಮಾನಿ. ಮಫ್ತಿ ಚಿತ್ರ ಡಿ.1ರಂದೇ ರಿಲೀಸ್ ಆಗಲಿದೆ ಎನ್ನುವುದು ಕನ್‍ಫರ್ಮ್ ಆಗಿಲ್ಲ. ಅಕಸ್ಮಾತ್, ಮಫ್ತಿ ಅದೇ ದಿನಕ್ಕೆ ರಿಲೀಸ್ ಆಗಲಿದೆ ಎನ್ನುವುದು ಕನ್‍ಫರ್ಮ್ ಆದರೆ, ನಾನೇ ಒಂದು ವಾರ ಮುಂದಕ್ಕೆ ಹೋಗುತ್ತೇನೆ ಎಂದಿದ್ದಾರೆ ಚಂದ್ರು. ಅದಕ್ಕೆ ಕಾರಣ, ಚಂದ್ರು ಕೂಡಾ ಶಿವಣ್ಣನ ಅಭಿಮಾನಿ.